ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಭೋಜೇಗೌಡರ ಕಾರ್‌ನ ನಂಬರ್ ಪ್ಲೇಟ್ ನಕಲಿಸಿ ಮಾರಾಟಕ್ಕಿಟ್ಟ ಪ್ರಕರಣದಲ್ಲಿ ಶಹಬಾಜ್ ಹಾಗೂ ಮಂಜುನಾಥ್ ಎಂಬಿಬ್ಬರನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಭೋಜೇಗೌಡರ ಆಪ್ತ ಸಹಾಯಕ ನೀಡಿದ್ದ ದೂರಿನನ್ವಯ ಕ್ವೀನ್ಸ್ ರಸ್ತೆಯಲ್ಲಿರುವ ಐ ಕಾರ್ಸ್ ಸ್ಟುಡಿಯೋ ಮಾಲಕ ಇಮ್ರಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆತ ನೀಡಿದ ಮಾಹಿತಿಯನ್ವಯ ಮೈಸೂರು ಮೂಲದ ಶಹಬಾಜ್ ಎಂಬವನನ್ನು ಸೆರೆ ಹಿಡಿದಿದ್ದಾರೆ.
ತನಗೆ ಕಾರು ನೀಡಿದವನು ಮಂಜುನಾಥ್ ಎಂಬ ಶಹಬಾಜ್ ಹೇಳಿಕೆ ಆಧರಿಸಿ ಮಂಜುನಾಥ್ನನ್ನೂ ಬಂಧಿಸಲಾಗಿದೆ. ಆದರೆ ಆರೋಪಿಗಳಿಬ್ಬರು ನಕಲಿ ನಂಬರಿನ ಮೂಲ ಯಾವುದು ಎಂಬ ವಿಷಯವನ್ನು ಬಾಯಿ ಬಿಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಿತ್ರವೆಂದರೆ, ಪ್ರಕರಣದಲ್ಲಿ ಬಂಧಿತನಾಗಿರುವ ಶಹಬಾಜ್ ಮೈಸೂರು ಭಾಗದಲ್ಲಿ ಜೆಡಿಎಸ್ನ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ಟಿಕೆಟ್ ಗಿಟ್ಟಿಸಲು ಹಲವು ಜೆಡಿಎಸ್ ನಾಯಕರೊಂದಿಗೆ ಕಾಣಿಸಿಕೊಂಡಿದ್ದ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ:ಪೂಲ್ ಪಂದ್ಯದಲ್ಲಿ ಸೋತಿದ್ದಕ್ಕೆ ನಕ್ಕ ಜನ.. ಮಾಲೀಕ, ಮಗು ಸೇರಿದಂತೆ 7 ಜನರನ್ನು ಗುಂಡಿಟ್ಟು ಕೊಂದ ಬಂದೂಕುಧಾರಿಗಳು!
ಪ್ರಕರಣದ ಪೂರ್ಣ ವಿವರ: ಭೋಜೇಗೌಡರ ಕಾರ್ ನಂಬರ್ ಪ್ಲೇಟ್ ಅಳವಡಿಸಿ ನಕಲಿ ದಾಖಲೆಗಳೊಂದಿಗೆ ಕಾರು ಮಾರಾಟಕ್ಕಿಟ್ಟ ಘಟನೆ ಶನಿವಾರ ನಡೆದಿತ್ತು. ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಪಕ್ಕದಲ್ಲಿರುವ ಐ ಕಾರ್ಸ್ ಸ್ಟುಡಿಯೋದಲ್ಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರ್ ನಿಲ್ಲಿಸಲಾಗಿತ್ತು. ಇದನ್ನು ಅವರ ಆಪ್ತ ಸಹಾಯಕ ಗಮನಿಸಿ ತಕ್ಷಣ ಶೋರೂಂ ಒಳಗೆ ತೆರಳಿ ವಿಚಾರಿಸಿದ್ದರು. ಅಲ್ಲಿನ ಸಿಬ್ಬಂದಿ, ಕಾರ್ ಮಾರಾಟಕ್ಕಿದೆ, ನಿಮಗೆ ಬೇಕಿತ್ತಾ? ಟೆಸ್ಟ್ ರೈಡ್ ನೋಡ್ತೀರಾ ಎಂಬುದಾಗಿ ಪ್ರಶ್ನಿಸಿದ್ದಾರೆ.
ಇದರಿಂದ ಮತ್ತಷ್ಟು ಅನುಮಾನಗೊಂಡ ಭೋಜೇಗೌಡರ ಆಪ್ತ ಸಹಾಯಕ ಕೂಡಲೇ ಕಾರ್ ದಾಖಲಾತಿಗಳನ್ನು ಪರಿಶೀಲಿಸಿದ್ದು, ಕಾರ್ ಎಂಎಲ್‌ಸಿ ಭೋಜೇಗೌಡರ ಹೆಸರಿನಲ್ಲಿರುವುದು ಗೊತ್ತಾಗಿದೆ. ಕೂಡಲೇ ಕರೆ ಮಾಡಿ, ನೀವು ಕಾರ್ ಸೇಲ್ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಭೋಜೇಗೌಡರು ಇಲ್ಲ, ಕಾರು ನನ್ನ ಬಳಿಯೇ ಇದೆ ಎಂದು ಹೇಳಿದ್ದಾರೆ.
ಬಳಿಕ, ಶೋರೋಂನಲ್ಲಿ ನಿಮ್ಮ ಕಾರ್ ಅದೇ ನಂಬರ್ನಲ್ಲಿ ಮತ್ತೊಂದು ಕಾರ್ ಇರುವುದಾಗಿ ಎಲ್ಲಾ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಭೋಜೇಗೌಡರ ಆಪ್ತ ಸಹಾಯಕ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ ಸಮೇತ ಐ ಕಾರ್ಸ್ ಸ್ಟುಡಿಯೋ ಮಾಲೀಕ ಇಮ್ರಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ತಾನು ಪ್ರೀತಿಸುತ್ತಿದ್ದ ಯುವತಿಗೆ ಕ್ಲೋಸ್ ಆದ ಸ್ನೇಹಿತ: ಗೆಟ್ ಟುಗೆದರ್ಗೆಂದು ಕರೆದು ಭೀಭತ್ಸವಾಗಿ ಕೊಂದ ಗೆಳೆಯ