ಬೆಂಗಳೂರು:ಅಯೋಧ್ಯೆ ರಾಮಮಂದಿರಕ್ಕೆ 24 ಅರ್ಚಕರ ನೇಮಕ ಆಗಿದೆ. ಅದರಲ್ಲಿ ಇಬ್ಬರು ದಲಿತರು ಅವರ ಭಾಷೆಯಲ್ಲಿ. ನಾನು ಅವರನ್ನ ದಲಿತ ಅನ್ನೊಲ್ಲ, ಹಿಂದೂ ಎನ್ನುತ್ತೇನೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದಲಿತರನ್ನು ಅರ್ಚಕರನ್ನಾಗಿ ಮಾಡ್ತಾರಾ ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಪ್ರಭು ಶ್ರೀರಾಮಚಂದ್ರ ದೇವಸ್ಥಾನಕ್ಕೆ ಮೊದಲ ಇಟ್ಟಿಗೆ ಇಟ್ಟಿರುವುದು ಕೂಡ ಒಬ್ಬ ದಲಿತ. ಆತನನ್ನ ನಾನು ದಲಿತ ಅಂತ ಹೇಳಲ್ಲ. ಅವನೊಬ್ಬ ಹಿಂದೂ ಅಂತಲೇ ಹೇಳ್ತೇನೆ ಎಂದರು.
ಸಿದ್ದರಾಮಯ್ಯ ಸಹ ರಾಮಭಕ್ತರೇ:ಸಿದ್ದರಾಮಯ್ಯ ರಾಮಮಂದಿರಕ್ಕೆ ಭೇಟಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಬರೀ ಸಿದ್ದರಾಮಯ್ಯ ಅವರ ಭಾವನೆಗಳು ಅಲ್ಲ. ಇಡೀ ದೇಶದ ಹಿಂದೂಗಳ ಭಾವನೆಗಳೂ ಇದೆ. ರಾಮ ನಮ್ಮ ದೇವರು. ಸಿದ್ದರಾಮಯ್ಯ ಸಹ ರಾಮನ ಭಕ್ತರೇ. ನಾನು ಟೀಕೆ ಮಾಡಲ್ಲ. ಸಿದ್ದರಾಮಯ್ಯ ರಾಮ ಮಂದಿರಕ್ಕೆ ಹೋಗ್ತಾರೆ ಅಂದ್ರೆ ನಾನು ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಸಿದ್ದರಾಮಯ್ಯ ಹೇಳಿದ ರೀತಿಯಲ್ಲಿ ಅವರ ಬೇರೆ ನಾಯಕರು ರಾಮ ಮಂದಿರಕ್ಕೆ ಹೋಗಲಿ ಎಂದು ತಿಳಿಸಿದರು.
ಯಾರೂ ನಮ್ಮ ಸಂಪರ್ಕದಲ್ಲಿಲ್ಲ:ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಬದಲಾಗುವ ವಿಚಾರವಾಗಿ ಮಾತನಾಡುತ್ತ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ನಾವು ಡಿಕೆಶಿ ತರ ಶೋ ಆಫ್ ಕೊಡೋದಿಲ್ಲ. ಬಿಜೆಪಿ ಇಂದ ಸಾಲಾಗಿ ಬರೋಕೆ ನಿಂತಿದ್ದಾರೆ ಅಂತ ಹೇಳಿದ್ರು. ಯಾರೆಲ್ಲ ಹೋಗಿದಾರೆ ಅಂತ ಈಗ ಡಿಕೆ ಶಿವಕುಮಾರ್ ತೋರಿಸಲಿ. ನನ್ನ ಸಂಪರ್ಕದಲ್ಲಿ ಅಂತೂ ಯಾರೂ ಇಲ್ಲ. ಇದ್ದಿದ್ರೆ ಒಬ್ಬೊಬ್ಬರದ್ದೇ ಹೆಸರು ಹೇಳುತ್ತಿದ್ದೆ. ಆಗ ಅವರು ಟಿವಿ ನೋಡಿಕೊಂಡು ಖುಷಿಯಾಗ್ತಿದ್ರು. ನಮಗೆ ಯಾರ ಜೊತೆಯೂ ಸಂಪರ್ಕ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಮನ ವಿಚಾರದಲ್ಲಿ ರಾಜಕಾರಣ ಮಾಡಿದ್ರೆ, ನಾವು ಸರ್ವನಾಶ ಆಗಿ ಹೋಗಲಿ. ಈಗ ನಾವು ರಾಮಮಂದಿರ ಕಟ್ಟುತ್ತಿದ್ದೇವೆ, ಅದಕ್ಕೆ ಕೋರ್ಟ್ ಕೂಡ ಸಹಕರಿಸಿದೆ. ಇದೇ 22ಕ್ಕೆ ಉದ್ಘಾಟನೆ ಆಗುತ್ತಿದೆ. ಭಿನ್ನಾಭಿಪ್ರಾಯ ಇದ್ದವರೂ ಸಹಕಾರ ನೀಡಿದ್ದಾರೆಂಬುದು ಸಂತೋಷ. ದೇಶದಲ್ಲಿ ಎಲ್ಲ ಹಿಂದೂಗಳು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಹೋಗಬೇಕು ಎಂದರು.
ಹೈಕಮಾಂಡ್ ಭೇಟಿ ಫಲಪ್ರದ: ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಭೇಟಿ ಫಲಪ್ರದ ಆಗಿದೆ. ರಾಜ್ಯದ ಅನೇಕ ವಿಚಾರಗಳನ್ನ ಅಮಿತ್ ಶಾ, ಅರುಣ್ ಸಿಂಗ್ ಗಮನಕ್ಕೆ ತಂದಿದ್ದೇನೆ. 28 ಲೋಕಸಭಾ ಕ್ಷೇತ್ರ ಗೆಲ್ಲಬೇಕು. ಹಾವೇರಿಗೆ ಮಗನಿಗೆ ಟೆಕೆಟ್ ಕೇಳಿದ್ದೇನೆ. ಪಾರ್ಲಿಮೆಂಟರಿ ಬೋರ್ಡ್, ಚುನಾವಣಾ ಸಮಿತಿ ಇದೆ. ಟಿಕೆಟ್ ಕೊಡೋದು ಅವರ ತೀರ್ಮಾನಕ್ಕೆ ಬಿಟ್ಟಿದ್ದಾಗಿದೆ. ಅವರ ತೀರ್ಮಾನಕ್ಕೆ ಬದ್ಧ. ಮಗನಿಗೆ ಕೊಟ್ರೂ, ಬೇರೆಯವರಿಗೆ ಕೊಟ್ರೂ ಕೆಲಸ ಮಾಡುತ್ತೇವೆ. ಅಭ್ಯರ್ಥಿ ಗೆಲ್ಲಿಸಿ, ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ: ಸಿಎಂ ಸಿದ್ದರಾಮಯ್ಯ