ಕರ್ನಾಟಕ

karnataka

ETV Bharat / state

ಸರಣಿ ದರೋಡೆ ಪ್ರಕರಣ.. ಇಬ್ಬರು ಆರೋಪಿಗಳಿಗೆ ಆನೇಕಲ್​​ ಪೊಲೀಸರಿಂದ ಗುಂಡೇಟು - ಈಟಿವಿ ಭಾರತ ಕನ್ನಡ

ಆನೇಕಲ್​, ಜಿಗಣಿ, ಬನ್ನೇರುಘಟ್ಟ ದರೋಡೆ ಪ್ರಕರಣ - ಇಬ್ಬರ ಕಾಲಿಗೆ ಪೊಲೀಸರಿಂದ ಗುಂಡೇಟು- ಆರೋಪಿಗಳು ಆಸ್ಪತ್ರೆಗೆ ದಾಖಲು

two-accused-injured-in-police-firing-at-anekal
ಸರಣಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಆನೇಕಲ್​​ ಪೊಲೀಸರಿಂದ ಗುಂಡೇಟು

By

Published : Dec 25, 2022, 6:02 PM IST

Updated : Dec 25, 2022, 7:48 PM IST

ಆನೇಕಲ್ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳಿಗೆ ಆನೇಕಲ್​ ಪೊಲೀಸರು ಗುಂಡೇಟು ನೀಡಿದ್ದಾರೆ. ಬಂಧಿಸಲು ಹೋದಾಗ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್​ ಮಾಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆನೇಕಲ್, ಜಿಗಣಿ ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ದರೋಡೆ ನಡೆಸಿದ್ದ ಗುಂಪಿನಲ್ಲಿನ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್​ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಕಾಲಿಗೆ ಗುಂಡೇಟು : ಆನೇಕಲ್ - ಅತ್ತಿಬೆಲೆ ರಸ್ತೆಯ ದಿನ್ನೂರು ನೀಲಗಿರಿ ತೋಪಿನಲ್ಲಿ ಪೊಲೀಸ್ ಪೇದೆ ರಂಗನಾಥ್ ಎಂಬವರ ಮೇಲೆ ಗಾಂಜಾ ಅಮಲಿನಲ್ಲಿ ವರುಣ್ ಅಲಿಯಾಸ್​​ ಕೆಂಚ ಎಂಬ ರೌಡಿಶೀಟರ್ ಸೇರಿ ನಾಲ್ವರು ಮಾರಣಾಂತಿಕ‌ ಹಲ್ಲೆ ನಡೆಸಿದ್ದರು. ಇವರಲ್ಲಿ ಕಿಶೋರ್ ಎಂಬಾತ ಸಿಕ್ಕಿಬಿದ್ದಿದ್ದು, ರೌಡಿ ಶೀಟರ್ ವರುಣ್ ಸ್ಥಳದಿಂದ ಪರಾರಿಯಾಗಿದ್ದ.

ಆರೋಪಿ ವರುಣ್​ ಆನೇಕಲ್​ನ ಜಿಗಣಿಯ ಕಲ್ಲುಬಾಳು ಬಳಿಯ ಮನೆಯೊಂದರಲ್ಲಿ​ ಅಡಗಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯ ಮನೆಯನ್ನು ಸುತ್ತುವರೆದಿದ್ದರು. ಈ ಸಂದರ್ಭ ಆರೋಪಿಯನ್ನು ಸೆರೆಹಿಡಿಯಲು ಆನೇಕಲ್ ಇನ್ಸ್ಪೆಕ್ಟರ್ ಚಂದ್ರಪ್ಪ ಹಾಗು ಕಾನ್​ಸ್ಟೇಬಲ್​ ಶಂಕರ್ ಮುಂದಾಗಿದ್ದಾರೆ. ಈ ವೇಳೆ ವರುಣ್​​, ಇನ್ಸ್ಪೆಕ್ಟರ್ ಹಾಗು ಕಾನ್​ಸ್ಟೇಬಲ್​ ಶಂಕರ್ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಅನಿವಾರ್ಯವಾಗಿ ಆನೇಕಲ್ ಕಾನ್​ಸ್ಟೇಬಲ್​ ಚಂದ್ರಪ್ಪ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್​ ಸಿಬ್ಬಂದಿಗೆ ಚೂರಿಯಿಂದ ಹಲ್ಲೆ..ಆರೋಪಿಗೆ ಗುಂಡೇಟು: ಜಿಗಣಿ ಹಾಗು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಜಯ್ ಅಲಿಯಾಸ್​​ ಮೆಂಟಲ್ ಎಂಬುವವನ ಕಾಲಿಗೆ ಜಿಗಣಿ ಇನ್ಸಪೆಕ್ಟರ್ ಸುದರ್ಶನ್ ಗುಂಡು ಹಾರಿಸಿದ್ದಾರೆ. ಆನೇಕಲ್ ಹಾರಗದ್ದೆ ಸಮೀಪದ ನಾಯನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ಅವಿತಿದ್ದ ಅಜಯ್ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿ ಬಂಧನಕ್ಕೆ ಯತ್ನಿಸಿದ್ದಾರೆ.

ಈ ವೇಳೆ ಆರೋಪಿ ಪೊಲೀಸ್​​ ಸಿಬ್ಬಂದಿ ಮಹೇಶ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಇನ್ಸ್‌ಪೆಕ್ಟರ್ ಸುದರ್ಶನ್ ಅವರು ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಲೆಕ್ಕಿಸದ ಆರೋಪಿ ಮತ್ತೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಇನ್ಸ್‌ಪೆಕ್ಟರ್ ಸುದರ್ಶನ್ ಅವರು ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸ್​ ಸಿಬ್ಬಂದಿ ಮಹೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಗಣಿ ಮತ್ತು ಬನ್ನೇರುಘಟ್ಟದಲ್ಲಿ ಸರಣಿ ದರೋಡೆ ಪ್ರಕರಣ: ಕಳೆದ ಕೆಲವು ದಿನಗಳ ಹಿಂದೆ ಬನ್ನೇರುಘಟ್ಟ- ಕನಕಪುರ ರಸ್ತೆಯ ಟಿಕೆ ಫಾಲ್ಸ್ ಬಳಿ ಕ್ಯಾಂಟರ್ ವಾಹನ ಚಾಲಕ ಚೇತನ್ ನನ್ನು ಅಡ್ಡಗಟ್ಟಿ ಕೈಕಾಲು ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆಟೋ ಕೃಷ್ಣ ಅಲಿಯಾಸ್​ ಕಳ್ಳ ಕೃಷ್ಣ, ಅಜಯ್​​ನನ್ನು ಬಂಧಿಸಲು ಬನ್ನೇರುಘಟ್ಟ ಇನ್ಸ್ಪೆಕ್ಟರ್ ಉಮಾ ಮಹೇಶ್ ಬಲೆ ಬೀಸಿದ್ದರು. ಈ ಬಗ್ಗೆ ತಿಳಿದ ಆರೋಪಿಗಳು ತಲೆಮರೆಸಿಕೊಂಡಿದ್ದರು.

ಬಳಿಕ ಮರುದಿನ ಹಾರಗದ್ದೆಯಲ್ಲಿ ಆಟೋ ಚಾಲಕ ಗೌರೇನಹಳ್ಳಿಯ ಮೌಲಾ ಎಂಬುವವರನ್ನು ಅಪಹರಿಸಿದ ತಂಡ ಮಾರತ್ತಹಳ್ಳಿ ಮೇಲ್ಸೇತುವೆ ಬಳಿ ಬಿಟ್ಟು, ಆಟೋ ಸಮೇತ ಮೌಲಾರ ತಾಯಿಯಿಂದ ಒಂದು ಲಕ್ಷ ಹಣ ಪಡೆದು ಆಟೋ ಕೃಷ್ಣ ಹಾಗು ಅಜಯ್ ಪರಾರಿಯಾಗಿದ್ದರು.

ಈ ಹಿಂದೆ ಎಲೆಕ್ಟ್ರಾನಿಕ್ ಸಿಟಿ ದರೋಡೆಯೊಂದರಲ್ಲಿ ಪ್ರಮುಖ ಆರೋಪಿ ಆಟೋ ಕೃಷ್ಣನ ಕಾಲಿಗೆ ಎಲೆಕ್ಟ್ರಾನಿಕ್ ಸಿಟಿಯ ಆಗಿನ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಗುಂಡು ಹಾರಿಸಿದ್ದರ ಪರಿಣಾಮ ಆಟೋ ಕೃಷ್ಣ ಬಲಗಾಲು ಕಳೆದುಕೊಂಡಿದ್ದ.

ಇದನ್ನೂ ಓದಿ :ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ರೌಡಿ ಶೀಟರ್​ ಕಾಲಿಗೆ ಶಿವಮೊಗ್ಗ ಪೊಲೀಸರಿಂದ ಗುಂಡೇಟು

Last Updated : Dec 25, 2022, 7:48 PM IST

ABOUT THE AUTHOR

...view details