ಬೆಂಗಳೂರು:ತುಂಗಾನಗರ ಮುಖ್ಯರಸ್ತೆಯ ಮಂಜುನಾಥ ಕೇಕ್ ಕಾರ್ನರ್ ಆ್ಯಂಡ್ ಸ್ವೀಟ್ಸ್ ಬೇಕರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕರಾದ ಬಸವರಾಜ್ (33) ಮತ್ತು ಭರತ್ (25) ಬಂಧಿತರು ಎಂದು ತಿಳಿದುಬಂದಿದೆ. ಮತ್ತಿಬ್ಬರು ಅರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಬಸವರಾಜ್ ಮತ್ತು ಬೇಕರಿ ಮಾಲೀಕ ಚಂದ್ರಶೇಖರ್ ಅವರಿಗೂ ಕೆಲ ದಿನಗಳ ಹಿಂದೆ ಪಪ್ಸ್‌ನ ವಿಚಾರಕ್ಕೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಬಸವರಾಜ್ ಆ.16 ರ ಸಂಜೆ 5 ಗಂಟೆಗೆ ಇತರೆ ಆರೋಪಿಗಳೊಂದಿಗೆ ಬೇಕರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸವರಾಜ್ ಮತ್ತು ಸಹಚರರು ಬೇಕರಿಗೆ ನುಗ್ಗಿ ಕಬ್ಬಿಣದ ಸಲಾಕೆ ಹಾಗೂ ಕಲ್ಲಿನಿಂದ ಬೇಕರಿ ಶೋ ಕೇಸ್ ಧ್ವಂಸಗೊಳಿಸಿದ್ದರು. ಅಲ್ಲದೆ, ತಿಂಡಿ-ತಿನಿಸುಗಳನ್ನು ಹೊರಗೆಸೆದು ಅಟ್ಟಹಾಸ ಮೆರೆದಿದ್ದರು. ಜತೆಗೆ, ಬೇಕರಿ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಡ್‌ನಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದರು. ಬೇಕರಿ ಮಾಲೀಕರಿಗೆ ಸುಮಾರು 35 ಸಾವಿರ ನಷ್ಟ ಉಂಟು ಮಾಡಿದ್ದರು.
ಎರಡು ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ತಮ್ಮ ಬಗ್ಗೆ ಯಾವುದೇ ಸುಳಿವು ಸಿಗದಂತೆ ಬೈಕ್‌ಗಳ ನೋಂದಣಿ ಫಲಕಗಳಿಗೆ ಸಗಣಿ ಬಳಿದುಕೊಂಡಿದ್ದರು. ಜತೆಗೆ, ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿಕೊಂಡು ಬಂದು ದುಷ್ಕೃತ್ಯ ಎಸಗಿದ್ದರು. ಈ ದೃಶ್ಯಾವಳಿ ಬೇಕರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.