ಬೆಂಗಳೂರು: ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಬೆಂಗಳೂರು:ನಗರದ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಮಾರಕಾಸ್ತ್ರ ಹಿಡಿದು ಒಂಟಿಯಾಗಿ ಸಂಚರಿಸುವವರು, ಡೆಲಿವರಿ ಬಾಯ್ಗಳನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಜಬಿ ಹಾಗೂ ಜುನೈದ್ ಬಂಧಿತ ಆರೋಪಿಗಳು. ಡೆಲಿವರಿ ಬಾಯ್ಸ್, ಒಂಟಿಯಾಗಿ ಸಂಚರಿಸುವವರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಅಡ್ಡ ಹಾಕಿ ಬೆದರಿಸಿ ಅವರ ಮೊಬೈಲ್ ಫೋನ್‌ಗಳು, ಹಣ ಕಸಿದುಕೊಂಡು ಪರಾರಿಯಾಗುತ್ತಿದ್ದರು.
ಕಳೆದ ತಿಂಗಳು 17ರಂದು ಹಲಸೂರು, ರಾಮಮೂರ್ತಿ ನಗರದಲ್ಲಿ ಆರೋಪಿಗಳು ಇದೇ ರೀತಿ ಸುಲಿಗೆ ಗೈದಿದ್ದರು. ಒಂದೇ ದಿನ ಎರಡು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳ ಪತ್ತೆಗೆ ಪೂರ್ವ ವಿಭಾಗದ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಜಬಿ ವಿರುದ್ಧ ಹತ್ಯೆ, ದ್ವಿಚಕ್ರ ವಾಹನ ಕಳ್ಳತನ, ದರೋಡೆ, ರಾಬರಿ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಲಕ್ಷ 50 ಸಾವಿರ ರೂ ಮೌಲ್ಯದ ಮೂರು ದ್ವಿಚಕ್ರ ವಾಹನಗಳು, 1 ಲ್ಯಾಪ್‌ಟಾಪ್, 9 ಮೊಬೈಲ್ ಫೋನ್‌ಗಳು, 1 ಸ್ಮಾರ್ಟ್ ವಾಚ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಖ್ಯಾತ 'ಎಸ್ಕೇಪ್ ಕಾರ್ತಿಕ್' ಬಂಧನ:ಇದುವರೆಗೆ ನೂರಕ್ಕೂ ಅಧಿಕ ಮನೆ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿ ಆರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ನನ್ನು ಗೋವಿಂದರಾಜ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣವೊಂದರ ಸಂಬಂಧ ಗೋವಾಗೆ ಹೋಗಿದ್ದ ಗೋವಿಂದರಾಜ ನಗರ ಠಾಣಾ ಪೊಲೀಸರು ಅಲ್ಲಿ ಎಸ್ಕೇಪ್ ಕಾರ್ತಿಕ್ನನ್ನು ಬಂಧಿಸಿದ್ದಾರೆ.
ಮದುವೆಯಾಗಿ ಇಬ್ಬರು ಮಕ್ಕಳಿರುವ ಈತ ವಿಲಾಸಿ ಜೀವನ ಹಾಗೂ ಕ್ಯಾಸಿನೋ ಚಟಕ್ಕಾಗಿ ಮನೆಗಳ್ಳತನಗಳಲ್ಲಿ ಭಾಗಿಯಾಗುತ್ತಿದ್ದ. ಕಳ್ಳತನ ಮಾಡಿದ ವಸ್ತುಗಳನ್ನು ಅಡವಿಟ್ಟು ಬಂದ ಹಣದಲ್ಲಿ ಈತ ಮೋಜು ಮಸ್ತಿ ಮಾಡುತ್ತಿದ್ದ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮಾತ್ರವಲ್ಲದೆ ಮೈಸೂರು ಹಾಸನದಲ್ಲಿಯೂ ಮನೆಗಳ್ಳತನ ಮಾಡಿರುವ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಇದುವರೆಗೆ ಬರೋಬ್ಬರಿ 20ಕ್ಕೂ ಹೆಚ್ಚು ಬಾರಿ ಪೊಲೀಸರಿಂದ ಬಂಧನವಾಗಿರುವ ಈತ ಎರಡು ಬಾರಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದನು. ಆದ್ದರಿಂದ ಈತ ಎಸ್ಕೇಪ್ ಕಾರ್ತಿಕ್ ಎಂದೇ ಕುಖ್ಯಾತಿ ಹೊಂದಿದ್ದಾರೆ. ಕಳೆದ ವರ್ಷ ಹೆಣ್ಣೂರು ಠಾಣಾ ಪೊಲೀಸರು ಈತನನ್ನು ಬಂಧಿಸಿದ್ದರು. ಸದ್ಯ ಗೋವಿಂದರಾಜ ನಗರ ಠಾಣಾ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಮನೆಗಳ್ಳತನದಲ್ಲಿ ಶತಕ ಬಾರಿಸಿರುವ ಕುಖ್ಯಾತ 'ಎಸ್ಕೇಪ್ ಕಾರ್ತಿಕ್' ಅರೆಸ್ಟ್