ಕರ್ನಾಟಕ

karnataka

ETV Bharat / state

ಕಾರಣವಿಲ್ಲದೆ ಟ್ವಿಟರ್ ಖಾತೆ ರದ್ದುಪಡಿಸುವುದು ಎಷ್ಟು ಸರಿ: ಹೈಕೋರ್ಟ್​ನಲ್ಲಿ ಟ್ವಿಟರ್​ ​ ಪ್ರಶ್ನೆ ​ - centra government notice

ಕೆಲವು ಟ್ವಿಟರ್ ಖಾತೆಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್​ಗೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಟ್ವಿಟರ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ಸರ್ಕಾರ ನೀಡಿರುವ ನೋಟಿಸ್ ರದ್ದು ಮಾಡಬೇಕು ಎಂದು ಮನವಿ ಮಾಡಿದೆ.

ಹೈಕೋರ್ಟ್​ನಲ್ಲಿ ಟ್ವಿಟ್ಟರ್​ ಪ್ರಶ್ನೆ ​
ಹೈಕೋರ್ಟ್​ನಲ್ಲಿ ಟ್ವಿಟ್ಟರ್​ ಪ್ರಶ್ನೆ ​

By

Published : Sep 26, 2022, 7:45 PM IST

Updated : Sep 26, 2022, 9:20 PM IST

ಬೆಂಗಳೂರು:ದೇಶದಲ್ಲಿರುವ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿ ಸರ್ಕಾರದ ಬಗ್ಗೆ ತಪ್ಪು ಸಂದೇಶ ರವಾನಿಸುವುದು, ದೇಶದ ಸಮಗ್ರತೆಗೆ ಧಕ್ಕೆಯಾಗುವಂತೆ ಮಾಡುವ ಟ್ವಿಟ್​​ಗಳನ್ನು ರದ್ದು ಮಾಡುವುದು ಸರಿ. ಆದರೆ, ಕಾರಣವಿಲ್ಲದೆ ಟ್ವಿಟ್ಟರ್ ಖಾತೆ ರದ್ದುಪಡಿಸುವುದು ಎಷ್ಟು ಸರಿ ಎಂದು ಹೈಕೋರ್ಟಿನಲ್ಲಿ ಟ್ವಿಟರ್ ಪ್ರಶ್ನಿಸಿದೆ.

ಕೆಲವು ಟ್ವಿಟರ್ ಖಾತೆಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್​ಗೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಪೀಠಕ್ಕೆ, ಟ್ವಿಟರ್ ಪರ ವಕೀಲರು ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ, ಆಕ್ಷೇಪಾರ್ಹ ಟ್ವಿಟ್‌ಗಳನ್ನು ತೆಗೆದು ಹಾಕಬಹುದು. ಆದರೆ, ಯಾವುದೇ ಕಾರಣ ನೀಡಿದೆ ಟ್ವಿಟರ್ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಕಾರಣವನ್ನು ನೀಡದೆ ಖಾತೆ ರದ್ದು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ನೋಟಿಸ್​ ರದ್ದು ಮಾಡುವಂತೆ ಮನವಿ: ಟ್ವಿಟ್‌ಗಳು ಆಕ್ಷೇಪಾರ್ಹವಾಗಿದ್ದಲ್ಲಿ ಅಂತಹ ಟ್ವೀಟ್​ ಹಿಂಪಡೆಯುವಂತೆ ಖಾತೆದಾರರಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿ ತಿಳಿಸಬಹುದಾಗಿತ್ತು. ಆದರೆ, ನೇರವಾಗಿ ಕಾರಣ ನೀಡದೆ ಖಾತೆ ರದ್ದು ಮಾಡಿ ಎಂದು ಟ್ವಿಟರ್​​ ಸಂಸ್ಥೆಗೆ ಸೂಚನೆ ನೀಡಿದೆ. ಇದರಿಂದ ನಮ್ಮ ಸಾಮಾಜಿಕ ಜಾಲಾತಾಣದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸರ್ಕಾರ ನೀಡಿರುವ ನೋಟಿಸ್ ರದ್ದು ಮಾಡಬೇಕು ಎಂದು ಮನವಿ ಮಾಡಿದರು.

ಬಳಕೆದಾರರ ಮೇಲೆ ಗಂಭೀರ ಪರಿಣಾಮ:ಅಲ್ಲದೆ, ನಿರ್ದಿಷ್ಟ ಖಾತೆ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ, ಅಂತಹ ಖಾತೆಯನ್ನು ನಮ್ಮ ಕಕ್ಷಿದಾರರೇ (ಟ್ವಿಟರ್) ಹಿಂಪಡೆಯುತ್ತಾರೆ. ಆದರೆ, ದೇಶದ ಹಿತಾಸಕ್ತಿಗೆ ವಿರುದ್ಧ ಇಲ್ಲದಿರುವ ಖಾತೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಸರ್ಕಾರದ ನೋಟಿಸ್‌ನಲ್ಲಿ ಖಾತೆದಾರರಿಗೆ ಯಾವುದೇ ಸೂಚನೆ ನೀಡದೆ ನಿರ್ಬಂಧಿಸಬೇಕು. ಕಾರಣ ನೀಡದೆ ಗೌಪ್ಯತೆ ಕಾಪಾಡಬೇಕು ಎಂದು ಸೂಚಿಸಿದೆ. ಇದು ಬಳಕೆದಾರರ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಏಕಾಏಕಿ 200 ರಿಂದ 400 ಖಾತೆಗಳನ್ನು ಬ್ಲಾಕ್ ಮಾಡಿದಲ್ಲಿ, ನಮ್ಮ ಕಕ್ಷಿದಾರರ ವ್ಯವಹಾರಕ್ಕೆ ಅಡ್ಡಿಯಾಗಲಿದೆ. ಕಾರಣ ನೀಡದೇ ಬ್ಲಾಕ್ ಮಾಡುವುದು ಕಾನೂನು ಬಾಹಿರವಾಗಲಿದೆ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ವಾಕ್ ಸ್ವಾತಂತ್ರ್ಯದ ಉಲ್ಲಂಘನೆ:ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಈ ರೀತಿಯಲ್ಲಿ ವಾಕ್ ಸ್ವಾತಂತ್ರ್ಯವನ್ನು ಮೊಟಕು ಗೊಳಿಸಲು ಸರ್ಕಾರಕ್ಕೆ ಅವಕಾಶವಿಲ್ಲ. ಟ್ವೀಟ್ ಮಾಡಿರುವ ವ್ಯಕ್ತಿಗೆ ಸಮಾನ ಅವಕಾಶಗಳನ್ನು ನೀಡಬೇಕಾಗುತ್ತದೆ. ಏಕಾಏಕಿ ಖಾತೆ ರದ್ದು ಮಾಡುವುದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಲಿದೆ.

ಪತ್ರಿಕೆ ನಡೆಸುವುದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಅಂತಹ ಪತ್ರಿಕೆಗೆ ಒಬ್ಬ ವ್ಯಕ್ತಿಯ ಸುದ್ದಿಗಳನ್ನು ಪ್ರಕಟಿಸಬಾರದು ಎಂದು ನಿರ್ಬಂಧ ವಿಧಿಸಿದರೆ, ಅದು ಆ ಪತ್ರಿಕೆಗೆ ನಷ್ಟವಾಗಲಿದೆ. ಒಬ್ಬ ಲೇಖಕನಿಗೆ ಅವರ ಲೇಖನ ಪ್ರಕಟಿಸಬಾರದು ಎಂದು ಹೇಳಿದರೆ ಅದು ಅವರ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ವಾದಿಸಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್​ ಮೊರೆ ಹೋದ ಟ್ವಿಟರ್​

ಈ ವೇಳೆ, ಟ್ವಿಟರ್​ ನಂತಹ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ಅಮೆರಿಕದಲ್ಲಿ ಯಾವ ವ್ಯವಸ್ಥೆ ಇದೆ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ನಮ್ಮ ಕಕ್ಷಿದಾರರಿಂದ ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿತು.

Last Updated : Sep 26, 2022, 9:20 PM IST

ABOUT THE AUTHOR

...view details