ಬೆಂಗಳೂರು:ಕೊರೊನಾ ಅಂದರೆ ಭಯ ಬೇಡ- ಜಾಗೃತಿ ಇರಲಿ, ರೋಗ ಲಕ್ಷಣ ಕಾಣಿಸಿಕೊಂಡರೆ ಕೊರೊನಾ ಪರೀಕ್ಷೆ ಮಾಡಿಸಿ ಅಂತ ಆರೋಗ್ಯ ಇಲಾಖೆಯೇನೋ ಸಾರುತ್ತಿದೆ. ಆದರೆ, ಕೊರೊನಾ ಆತಂಕಕ್ಕೆ ಕೋವಿಡ್ ಟೆಸ್ಟ್ ಮಾಡಿಸುವ ಮಂದಿಗೆ ಬರುವ ರಿಪೋರ್ಟ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿ ಶಾಕ್ ಕೊಡುತ್ತಿದೆ. ಇದೇನು ಲ್ಯಾಬ್ಗಳಲ್ಲಿ ಆಗುವ ಎಡವಟ್ಟಾ ಅಥವಾ ಕೊರೊನಾ ವೈರಸ್ ನಾ ರಿಫ್ಲೆಕ್ಟಾ ಒಂದು ಗೊತ್ತಾಗುತ್ತಿಲ್ಲ.
ಹೌದು, ದಿನೇ ದಿನೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು, ಸೋಂಕಿತರ ಸಂಪರ್ಕಿತರ ಸಂಖ್ಯೆಯು ಕಡಿಮೆ ಏನು ಇಲ್ಲ. ಇತ್ತ ಸೋಂಕು ನಿಯಂತ್ರಣಕ್ಕೆ ಬರಬೇಕು ಅಂದರೆ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆ ಮಾಡಿಸಲೇಬೇಕು. ರೋಗ ಲಕ್ಷಣ ಗೊತ್ತಾದ ಕೂಡಲೇ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಆರೋಗ್ಯ ಇಲಾಖೆ ಈಗಾಗಲೇ 22 ಲಕ್ಷಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಸ್ವಯಂ ಪ್ರೇರಿತ ಪರೀಕ್ಷೆ ಮಾಡಿಸಿಕೊಳ್ಳಿ ಮುಚ್ಚು ಮರೇ ಬೇಡ ಅಂತ ಸಲಹೆ ನೀಡಿದೆ. ಆದರೆ ಇದೇ ದೊಡ್ಡ ಸಮಸ್ಯೆಗೆ ಕಾರಣವಾಗಿದೆ.
ಕೋವಿಡ್ ಟೆಸ್ಟ್ ಮಾಡಿಸುವ ಮುನ್ನ ಎಚ್ಚರ:
ಹೌದು, ಲ್ಯಾಬ್‌ನಲ್ಲಿ ಕೋವಿಡ್ ಪರೀಕ್ಷಿಸಿದಾಗ ಮೊದಲು ನೆಗೆಟಿವ್ ನಂತರ ಪಾಸಿಟಿವ್ ಬರುವುದು. ಸಮಪರ್ಕವಾದ ಕೋವಿಡ್ ಟೆಸ್ಟ್ ರಿಸಲ್ಟ್ ಬರದೇ ಇರಲು ಕಾರಣವೇನು? ಯಾಕೆ ಈ ರೀತಿ ಸಮಸ್ಯೆ ಆಗ್ತಿದೆ ಎಂದು ಹುಡುಕುತ್ತಾ ಹೋದರೆ ಅದಕ್ಕೆ ನಾನಾ ಕಾರಣ ತೆರೆದುಕೊಳ್ಳುತ್ತಿದೆ.
ಆದರೆ ಇದಕ್ಕೂ ಮೊದಲು ರಿಪೋರ್ಟ್ ಗಜಿಬಿಜಿ ಬಗ್ಗೆ ನೋಡೋದಾದರೆ, ಹಲವು ಪ್ರಕರಣಗಳು ಕಣ್ಣ್ ಮುಂದೆ ಬರುತ್ತೆ. ಬೆಂಗಳೂರಿನ ವಿಜಯನಗರದ ಚಂದ್ರಲೇಔಟ್ ನಿವಾಸಿ ಕಿರಣ್ ಕುಮಾರ್, ಬೇರೊಂದು ಊರಿಗೆ ತೆರಳುವ ಉದ್ದೇಶದಿಂದ ಅದೇ ಏರಿಯಾದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 3 ರಂದು ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಅದೇ ದಿನ ರಾತ್ರಿ ಕರೆ ಮಾಡಿ ಪಾಸಿಟಿವ್ ಇರುವುದಾಗಿ, ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಇತ್ತ ರಾತ್ರಿಯಾಗಿದ್ದರಿಂದ ಬೆಳಗ್ಗೆ ಬರೋದಾಗಿ ಕಿರಣ್ ಮಾಹಿತಿ ನೀಡಿದ್ದಾರೆ. ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಬಂದ ಕಾರಣ ಅನುಮಾನಗೊಂಡು ಆಗಸ್ಟ್ 4 ರಂದು ಖಾಸಗಿ ಲ್ಯಾಬ್‌ನಲ್ಲಿ ಸ್ವಾಬ್ ನೀಡಿದ್ದಾರೆ. ಅದೇ ದಿನ ಮತ್ತೆ ಪಾಲಿಕೆ ಸಿಬ್ಬಂದಿ ಆ್ಯಂಬುಲೆನ್ಸ್ ಬರಲಿದ್ದು ರೆಡಿಯಾಗಿ ಅಂದಿದ್ದಾರೆ. ಈ ವೇಳೆ ಮೊಬೈಲ್ಗೆ ಪಾಸಿಟಿವ್ ರಿಪೋರ್ಟ್ ಮಸೇಜ್ ಬಂದಿಲ್ಲ, ರಿಪೋರ್ಟ್ ಕೊಟ್ಟರೆ ಬರೋದಾಗಿ ಕಿರಣ್ ತಿಳಿಸಿದ್ದಾರೆ. ಕೊನೆಗೆ ಒತ್ತಾಯಕ್ಕೆ ಮಣಿದು ನಗರದ ಹಜ್ ಭವನದ ಕೋವಿಡ್ ಕೇರ್ ಸೆಂಟರ್ಗೆ ಒಲ್ಲದ ಮನಸ್ಸಿನಿಂದಲ್ಲೇ ಶಿಫ್ಟ್ ಆಗಿದ್ದಾರೆ. ಆಗಲೂ ವರದಿ ಕೇಳಿದಾಗ ಆರೋಗ್ಯಾಧಿಕಾರಿಗಳು ನೀಡಿಲ್ಲ.
ಆಗಸ್ಟ್ 5 ರಂದು ಖಾಸಗಿ ಲ್ಯಾಬ್ನಿಂದ ರಿಪೋರ್ಟ್ ಬಂದಾಗ ಅದು ನೆಗಟಿವ್ ಆಗಿದೆ. ಅದನ್ನು ಬಿಬಿಎಂಪಿ ಅಧಿಕಾರಿಗಳಿಗೆ ತೋರಿಸಿದಾಗ ಸಮಸ್ಯೆಯಾಗೋದು ಬೇಡ ಅಂತ ಒಂದೇ ದಿನಕ್ಕೆ ಮನೆಗೆ ವಾಪಸ್ ಕಳಿಸಿದ್ದಾರೆ. ಈ ಬಗ್ಗೆ ಈ ಟಿವಿ ಭಾರತ್ನೊಂದಿಗೆ ಕಿರಣ್ ಕುಮಾರ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದರೆ ರಿಪೋರ್ಟ್ ಕೇಳಿ ನಂತರ ಕೋವಿಡ್ ಸೆಂಟರ್ಗೆ ಹೋಗಿ ಅಂತ ಸಲಹೆ ನೀಡುತ್ತಾರೆ. ಹಾಗೇ ಕೋವಿಡ್ ಸೆಂಟರ್ನಲ್ಲಿ ನಡೆಯುವ ಧೂಮಪಾನ ಮಧ್ಯಪಾನದ ಬಗ್ಗೆಯೂ ವಿವರಿಸಿದ್ದಾರೆ.