ಬೆಂಗಳೂರು:ಕಳೆದೆರಡು ದಿನಗಳಿಂದ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ನಡುವಿನ ಟ್ವೀಟ್ ವಾರ್ ಮುಂದುವರೆದಿದೆ.
ಆರೋಗ್ಯ ಪರಿಕರಗಳ ಖರೀದಿ ವೇಳೆ ಸರ್ಕಾರ ಕೋಟ್ಯಂತರ ರೂ. ಹಣವನ್ನು ಲೂಟಿ ಹೊಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಸರ್ಕಾರ ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು.
ಶ್ರೀರಾಮುಲು ಟ್ವೀಟ್ಗೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, ಬಳ್ಳಾರಿಯ ನಿಮ್ಮ ಅಣ್ಣ ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು, ಸವಾಲೆಸೆಯುವ ಮುನ್ನ ಇದು ನಿಮ್ಮ ಗಮನದಲ್ಲಿರಲಿ ಎಂದು ಬರೆದುಕೊಂಡಿದ್ದರು.
ಇದೀಗ ಸಿದ್ದರಾಮಯ್ಯಗೆ ಟಾಂಗ್ ನೀಡಿರುವ ರಾಮುಲು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುವುದಕ್ಕೂ ಮುನ್ನ ತಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಆರೋಪ ಮಾಡಿ ಆರೋಪಿಗಳಾಗಿರುವ ನಿಮ್ಮ ಪಕ್ಷದ ರಾಜ-ಮಹಾರಾಜರ ಬಗ್ಗೆ ಗಮನಹರಿಸುವುದು ಒಳಿತಲ್ಲವೇ ಎಂದು ಪ್ರತಿಟ್ವೀಟ್ ಮಾಡಿದ್ದಾರೆ.