ಬೆಂಗಳೂರು:ಭಾರತದ 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರೈತರ ಗಣತಂತ್ರ ಪರೇಡ್ ಹಿಂಸಾತ್ಮಕ ರೂಪ ಪಡೆದ ಬಗ್ಗೆ ರಾಜ್ಯ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ನಡೆದಿದೆ.
ರೈತರು ದಂಗೆಕೋರರಲ್ಲ, ಅವರನ್ನು ತಪ್ಪುದಾರಿಗೆಳೆದ ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು. ರೈತರ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಲಭೆ, ದೊಂಬಿ ಎಬ್ಬಿಸುತ್ತಿದ್ದಾರೆ. ಕಳ್ಳರ ಗುರು ರಾಹುಲ್ ಗಾಂಧಿಯವರೇ ಅನಾಹುತಗಳಿಗೆ ನೇರ ಕಾರಣ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಅವಿವೇಕಿ ಬಿಜೆಪಿಯೇ, ತಿಂಗಳಿಂದ ರೈತರು ತಮ್ಮ ಮಾತು ಕೇಳಬೇಕೆಂದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ರೈತರು ಮೃತರಾಗಿದ್ದಾರೆ. ಆದರೆ ಕೇಂದ್ರ ಗೃಹ ಸಚಿವ ಅವರಿಗೆ ರೈತರ ಜೊತೆ ಮಾತನಾಡುವ ಸೌಜನ್ಯವಿರಲಿಲ್ಲ. 11 ಕಾಟಾಚಾರದ ಸಭೆಗಳು ವಿಫಲವಾಗಿವೆ ಎಂದರೆ ನಿಮ್ಮ ಕಾಯ್ದೆಯಲ್ಲಿ ಸಮರ್ಥನೀಯ ಅಂಶವಿಲ್ಲ ಎಂದರ್ಥ ಟೀಕಿಸಿದೆ.
ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ, ಅಮಿತ್ ಶಾ ಅವರ ಅಸಾಮರ್ಥ್ಯಕ್ಕೆ ದೆಹಲಿ ಘಟನೆ ಸಾಕ್ಷಿ. ಇಂಟಲಿಜೆನ್ಸ್ ವೈಫಲ್ಯದ ಕನ್ನಡಿಯಾಗಿದೆ. ರೈತರ ಬೇಡಿಕೆ ಕೇಳದ ಪರಿಣಾಮ ಈ ಬೆಳವಣಿಗೆಗಳು, ಕಾಯ್ದೆ ಹಿಂಪಡೆಯದಿರುವುದೇ ಘಟನೆಗೆ ಕಾರಣವಾಗಿದೆ. ಕೆಂಪು ಕೋಟೆಗೆ ಲಗ್ಗೆ ಹಾಕಿದ್ದು ಕಾಂಗ್ರೆಸ್ನವರಲ್ಲ ರೈತರು. ನಿಮ್ಮ ಧೋರಣೆ ಬದಲಾಗದಿದ್ದರೆ ಪ್ರಧಾನಿ ಕಛೇರಿಗೂ ಮುತ್ತಿಗೆ ಹಾಕುವರು ಎಂದಿದೆ.