ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಸುದೀರ್ಘ ಟ್ವೀಟ್ ವಾರ್ ನಡೆದಿದೆ.
ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಟ್ವೀಟ್ ಮಾಡಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ, ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಯಕತ್ವ, ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇರುವವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. ರಾಷ್ಟ್ರ, ರಾಜ್ಯದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ಹಿರಿಯ ನಾಯಕರು ಸೇರಿದಂತೆ ಪಂಚಾಯ್ತಿ ಮಟ್ಟದವರೆಗೆ ಯಾರೇ ಪಕ್ಷಕ್ಕೆ ಸೇರಲು ಬಯಸಿದರೆ ಅವಕಾಶ ನೀಡಲಾಗುತ್ತದೆ ಎಂದಿತ್ತು.ಇದಕ್ಕೆ ಪ್ರತಿಯಾಗಿ ಟ್ವೀಟ್ ಮೂಲಕ ಲೇವಡಿ ಮಾಡಿದ್ದ ಬಿಜೆಪಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಗೊಂದಲವೇ ಬಗೆಹರಿದಿಲ್ಲ. ನಕಲಿ ಗಾಂಧಿ ಕುಟುಂಬವನ್ನು ಪ್ರಶ್ನಿಸಿದವರಿಗೆ ನೋಟಿಸ್ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತವೆಂಬುದಿಲ್ಲ, ನಕಲಿ ಗಾಂಧಿ ಕುಟುಂಬದ ಮಾತೇ ವೇದ ವಾಕ್ಯ! ಎಂದು ಹೇಳಿತ್ತು.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಅಯ್ಯೋ ರಾಜ್ಯ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪನವರ ಕುಟುಂಬ ಹಸ್ತಕ್ಷೇಪದ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಹಗರಣದ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದರಲ್ಲ ಸ್ವಾಮಿ ಏನಾಯ್ತು? ಯತ್ನಾಳ್ರನ್ನ ನಿಯಂತ್ರಿಸಲಾಗದ ರಾಜ್ಯ ಬಿಜೆಪಿ ಇತರರ ಬಗ್ಗೆ ಮಾತಾಡುವುದೇ ಹಾಸ್ಯಾಸ್ಪದ! ಎಂದಿತ್ತು.