ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜಧಾನಿಯಲ್ಲಿ ಪ್ರಚಾರದ ಬ್ಯಾನರ್ಗಳಿಗೆ ತಡೆ ನೀಡಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಆಯಾ ವಲಯದ ನೋಡಲ್ ಅಧಿಕಾರಿಗಳು ನಿಗಾವಹಿಸಬೇಕು. ಬ್ಯಾನರ್ ಮಾಡುವ, ಕಟ್ಟುವವರ ವಿರುದ್ಧ ಕಾರ್ಯಾಚರಣೆ ನಡೆಸಿ, ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತುಷಾರ್ ಗಿರಿನಾಥ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ಗಳು, ಬ್ಯಾನರ್‌ಗಳು ಮತ್ತು ಬಟಿಂಗ್ಸ್ ಇತ್ಯಾದಿಗಳನ್ನು ತೆಗೆದುಹಾಕಲು ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನು ಪಾಲಿಕೆ ಕಾಯ್ದೆಯ ಸೆಕ್ಷನ್ 254 ರ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶ : ಫ್ಲೆಕ್ಸ್, ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿ ಎಂದು ಹೈಕೋರ್ಟ್ ಈ ಹಿಂದೆ ಆದೇಶ ಹೊರಡಿಸಿತ್ತು. ಅದರಂತೆ, ಬಿಬಿಎಂಪಿ ಕಾಯ್ದೆ 2020, ಬಿಬಿಎಂಪಿ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಉಪ ವಿಧಿಗಳು 2018 ಹಾಗೂ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ) ತಡೆ ಕಾಯ್ದೆ 1981 ಅನುಸಾರ ಅನಗತ್ಯ ಬ್ಯಾನರ್ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.
ಬಿಬಿಎಂಪಿ ಮಾರ್ಷಲ್ಸ್, ಕಂದಾಯ ಮೌಲ್ಯ ಮಾಪಕರು, ನಿರೀಕ್ಷಕರು, ಸಹಾಯಕರು, ಕಿರಿಯ ಎಂಜಿನಿಯರ್‌ಗಳಿಗೆ ನಗರದಲ್ಲಿರುವ ಫ್ಲೆಕ್ಸ್ ಅಳವಡಿಸಿರುವುದರ ಕುರಿತು ಸರ್ವೇ ನಡೆಸಿ, ಎಫ್‌ಐಆರ್ ದಾಖಲಿಸಿ, ಫ್ಲೆಕ್ಸ್ ತೆರವುಗೊಳಿಸಲು ವೆಚ್ಚವಾದ ಹಣವನ್ನು ಅವರಿಂದಲೇ ವಸೂಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿತ್ತು.