ಕರ್ನಾಟಕ

karnataka

ETV Bharat / state

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಟರ್ಕಿ ಮೂಲದ ಮಹಿಳೆ ಸೇರಿ ಐವರ ಬಂಧನ

ದೇಶದೆಲ್ಲದೆಡೆ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಮಧ್ಯವರ್ತಿಗಳ ಜೊತೆ ಸಂಪರ್ಕದಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ದಂಧೆ ನಡೆಸುತ್ತಿದ್ದ ಟರ್ಕಿ ಮೂಲದ ಮಹಿಳೆ ಸಹಿತ ಐವರು ಹಲಸೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ವೇಶ್ಯಾವಾಟಿಕೆ ದಂಧೆ
ವೇಶ್ಯಾವಾಟಿಕೆ ದಂಧೆ

By ETV Bharat Karnataka Team

Published : Jan 9, 2024, 3:56 PM IST

Updated : Jan 9, 2024, 4:23 PM IST

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿಕೆ

ಬೆಂಗಳೂರು : ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಸೆಳೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ವಿದೇಶಿ ಮಹಿಳೆಯ ಸಹಿತ ಐವರು ಆರೋಪಿಗಳನ್ನ ಬೆಂಗಳೂರು ಪೂರ್ವ ವಿಭಾಗದ ಬೈಯ್ಯಪ್ಪನಹಳ್ಳಿ ಹಾಗೂ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಟರ್ಕಿ ಮೂಲದ ಬಯೋನ್ಯಾಜ್, ಬಿ.ಇ. ಪದವೀಧನಾಗಿರುವ ವೈಶಾಕ್, ತಮಿಳುನಾಡು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಗೋವಿಂದರಾಜು, ಪ್ರಕಾಶ್ ಹಾಗೂ ಅಕ್ಷಯ್ ಬಂಧಿತ ಆರೋಪಿಗಳು.

ದೊಮ್ಮಲೂರಿನ ಎಚ್​ಎಸ್​ಬಿಸಿ ಲೇಔಟಿನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಹಲಸೂರು ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿಯನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರಿಗೆ ವಹಿಸಲಾಗಿತ್ತು. ತನಿಖೆ ಮುಂದುವರೆಸಿದ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬೆಂಗಳೂರು ಡೇಟಿಂಗ್ ಕ್ಲಬ್ ಹೆಸರಿನ ಟೆಲಿಗ್ರಾಂ ಗ್ರೂಪ್ ನಿರ್ವಹಿಸುತ್ತಿದ್ದ ಆರೋಪಿ ವೈಶಾಕ್​ನನ್ನು ಬಂಧಿಸಿದ್ದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಟರ್ಕಿ ಮೂಲದ ಬಯೋನ್ಯಾಜ್, ಗೋವಿಂದರಾಜು, ಪ್ರಕಾಶ್ ಹಾಗೂ ಅಕ್ಷಯ್​ನನ್ನು ಬಂಧಿಸಿದ್ದಾರೆ.

ಹದಿನೈದು ವರ್ಷಗಳ ಹಿಂದೆಯೇ ಟರ್ಕಿಯಿಂದ ಬಂದಿದ್ದ ಆರೋಪಿ ಮಹಿಳೆ ಬಯೋನ್ಯಾಜ್, ರೋಹಿತ್ ಸ್ವಾಮಿಗೌಡ ಎಂಬಾತನನ್ನು ಮದುವೆಯಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಳು. ಕೆಲ ವರ್ಷಗಳ ಹಿಂದೆ ಪತಿ ತೀರಿ ಹೋಗಿದ್ದ. ಬಳಿಕ ದೇಶ, ವಿದೇಶಿ‌ ಮೂಲದ ಯುವತಿಯರನ್ನು ಬಳಸಿಕೊಂಡು ನಿರಂತರವಾಗಿ ವೇಶ್ಯಾವಾಟಿಕೆ ದಂಧೆ ನಡೆಸಿಕೊಂಡು ಬರುತ್ತಿದ್ದಳು. ಅಲ್ಲದೇ, ಜೈಪುರ, ಚೆನ್ನೈ, ಮೈಸೂರು, ದೆಹಲಿ, ಉದಯಪುರ, ಮುಂಬೈ ನಗರಗಳಲ್ಲಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಮಧ್ಯವರ್ತಿಗಳ ಜೊತೆ ಸಂಪರ್ಕದಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ದಂಧೆ ನಡೆಸುತ್ತಿದ್ದಳು ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಸದ್ಯ ಆರೋಪಿಗಳ ವಶದಲ್ಲಿದ್ದ ಉಜ್ಬೇಕಿಸ್ತಾನ್, ಕಜಕಿಸ್ತಾನ ಮೂಲದ ಆರು ಜನ, ಬಾಂಗ್ಲಾದೇಶ ಮೂಲದ ಓರ್ವ ಹಾಗೂ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮೂಲದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ :ಇತ್ತೀಚೆಗೆ ಬೆಂಗಳೂರಿನ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಯೊಂದರ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದರು. ಹೊರ ರಾಜ್ಯಗಳು ಹಾಗು ವಿದೇಶಗಳ ಒಟ್ಟು 44 ಮಹಿಳೆಯರನ್ನು ರಕ್ಷಿಸಿರುವ ಪೊಲೀಸರು, 34 ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಬಹುಮಹಡಿ‌ ಕಟ್ಟಡವೊಂದರ 1 ಮತ್ತು 6ನೇ ಅಂತಸ್ತಿನಲ್ಲಿ​ ಸ್ಪಾ ನಡೆಸುತ್ತಿದ್ದ ಅನಿಲ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಕೂಡಾ ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿ ಸ್ಪಾ ನಡೆಸುತ್ತಿದ್ದ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ :ಬೆಂಗಳೂರು: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ

Last Updated : Jan 9, 2024, 4:23 PM IST

ABOUT THE AUTHOR

...view details