ಬೆಂಗಳೂರು: ಕಾಂಗ್ರೆಸ್ ಪಕ್ಷದ ನಗು ಮುಖದ ನಾಯಕ ಧ್ರುವನಾರಾಯಣ ಇನ್ನಿಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ದಿವಂಗತ ಮಾಜಿ ಸಂಸದ ಧ್ರುವನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಬಡವರ ಕಷ್ಟಗಳನ್ನು ಸ್ಪಂದಿಸುತ್ತಿದ್ದರು. ಸಂಘಟನೆಯಿಂದ ಬೆಳೆದು ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಹತ್ತಿರವಾದ ನಾಯಕರಾಗಿದ್ದರು. ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ರು ಕೂಡ ಸಾಮನ್ಯ ಕಾರ್ಯಕರ್ತರಂತೆ ಇದ್ದರು ಎಂದು ಬಣ್ಣಿಸಿದರು.
ನಿನ್ನೆ ದೂರಾವಣಿ ಮೂಲಕ 5:45 ಕ್ಕೆ ಧ್ರುವನಾರಾಯಣ ಅವರ ಜೊತೆ ಮಾತಾಡಿದ್ದೆ. ನಂಜನಗೂಡಲ್ಲಿನ ಕಾರ್ಯಕ್ರಮದ ಬಗ್ಗೆ ಚರ್ಚೆ ಆಗಿತ್ತು. ಏನೇನು ಕಾರ್ಯಕ್ರಮ ಇದೆ ಅಂತ ಧ್ರುವನಾರಾಯಣ ಬೆಳಗ್ಗೆ ಕರೆ ಮಾಡ್ತಿನಿ ಅಂದಿದ್ರು. ಆದರೆ ಅವರ ಕರೆ ನಂಗೆ ಬರಲೇ ಇಲ್ಲ. ಇಂದು ಬೆಳಗ್ಗೆ ಬೇರೆ ಅವರು ಕರೆ ಮಾಡಿ ಧ್ರುವನಾರಾಯಣ್ ಅವರ ನಿಧನದ ಸುದ್ದಿ ತಿಳಿಸಿದರು. ನನಗೆ ನಂಬಲು ಸಾಧ್ಯವಾಗಿಲ್ಲ. ತಕ್ಷಣ ನಾನು ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿ ಕೇಳಿದೆ. ಹೌದು, ಧ್ರುವನಾರಾಯಣ ನಮ್ಮನ್ನು ಬಿಟ್ಟು ಹೋದ್ರು ಅಂತ ಶಿವಕುಮಾರ್ ಹೇಳಿದರು ಎಂದರು.
ನುಡಿ ನಮನ: ಕಲುಷಿತ ರಾಜಕೀಯವೇ ಕೇಂದ್ರೀಕೃತವಾಗಿರುವಾಗ ಸೈದ್ಧಾಂತಿಕ ಬದ್ಧತೆ, ಮೌಲ್ಯಾಧಾರಿತ, ಸರಳ, ಸಜ್ಜನಿಕೆಯೊಂದಿಗೆ ರಾಜಕೀಯ ಜೀವನ ನಡೆಸಿದ ನನ್ನ ಬಹುಕಾಲದ ರಾಜಕೀಯ ಒಡನಾಡಿ ಮಾಜಿ ಸಂಸದ ಧ್ರುವ ನಾರಾಯಣ್ ಅವರ ಅಗಲಿಕೆ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಭರಿಸಲಾರದ ನಷ್ಟ ಎಂದು ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಜೀವನ ಆರಂಭಿಸಿದ ಧ್ರುವನಾರಾಯಣ್, ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿಯನ್ನ ಹೊತ್ತಿದ್ದವರು. ತಮ್ಮ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ, ಲಂಚತನ, ಸೇರಿದಂತೆ ಯಾವ ಹಗರಣದ ಕಳಂಕಗಳೂ ಅವರ ಸುತ್ತ ಸುಳಿಯದಂತೆ ನಡೆದುಕೊಂಡವರು. ಪಕ್ಷ ಸಿದ್ಧಾಂತ, ಸರಳತೆ, ಸಜ್ಜನಿಕೆಯ ಜೊತೆಗೆ, ಪಕ್ಷ ವಹಿಸಿದ ಜವಾಬ್ದಾರಿಯನ್ನ ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ಛಾತಿ ಅವರಲ್ಲಿತ್ತು ಎಂದು ಹೇಳಿದರು.