ಬೆಂಗಳೂರು:ಬೆಂಗಳೂರಿನ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ಮತ್ತು ಜನನಿಬಿಡ ಪ್ರದೇಶ ಹೊಂದಿರುವ ವಿಧಾನಸಭಾ ಕ್ಷೇತ್ರ ಚಿಕ್ಕಪೇಟೆ. ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇರುವ ಈ ಕ್ಷೇತ್ರ ಸದ್ಯ ಬಿಜೆಪಿ ತೆಕ್ಕೆಯಲ್ಲಿದೆ. ಇತ್ತ ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ಕೈವಶ ಮಾಡಲು ಕಸರತ್ತು ನಡೆಸುತ್ತಿದೆ.
ಚಿಕ್ಕಪೇಟೆ ಕ್ಷೇತ್ರ ಬೆಂಗಳೂರಿನ ಜನಪ್ರಿಯ ದಿರಿಸು ಮಾರುಕಟ್ಟೆ ಹೊಂದಿರುವ ಕ್ಷೇತ್ರ. ವ್ಯಾಪಾರ ವಹಿವಾಟಿಗಳಿಂದಲೇ ಸದಾ ಜನನಿಬಿಡವಾಗಿರುವ ಈ ಕ್ಷೇತ್ರ ಬೆಂಗಳೂರಿನ ಲ್ಯಾಂಡ್ ಮಾರ್ಕ್ ಪ್ರದೇಶವಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಏಳು ವಾರ್ಡ್ಗಳು ಇವೆ. ಸುಧಾಮ ನಗರ, ಧರ್ಮರಾಯ ಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಸಿದ್ದಾಪುರ, ಹೊಂಬೇಗೌಡ ನಗರ ಹಾಗೂ ಜಯನಗರ ವಾರ್ಡ್ಗಳನ್ನು ಚಿಕ್ಕಪೇಟೆ ಕ್ಷೇತ್ರ ಒಳಗೊಂಡಿದೆ.
ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ:ಬೆಂಗಳೂರಿನ ಕೇಂದ್ರದಲ್ಲಿರುವ ಈ ಕ್ಷೇತ್ರ ಸದ್ಯ ಬಿಜೆಪಿ ತೆಕ್ಕೆಯಲ್ಲಿದೆ. ಉದಯ್ ಗರುಡಾಚಾರ್ ಬಿಜೆಪಿ ಹಾಲಿ ಶಾಸಕರಾಗಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಹೆಚ್ಚು ಪೈಪೋಟಿ ಇರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರ ಪ್ರಭುಗಳ ಚಿತ್ತ ಯಾರ ಮೇಲಿದೆ ಎಂಬುದನ್ನು ಅಳೆಯಲು ಕಷ್ಟ ಸಾಧ್ಯ. ಮೇಲ್ನೋಟಕ್ಕೆ ಬಿಜೆಪಿಗೆ ಸ್ವಲ್ಪ ಮೇಲುಗೈ ಇದ್ದಂತೆ ಕಂಡುಬಂದರೂ ಮಾಜಿ ಶಾಸಕ ಆರ್.ವಿ.ದೇವರಾಜ್ ಬಿಜೆಪಿಯಿಂದ ಕ್ಷೇತ್ರವನ್ನು ಮರುವಶಪಡಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಬಹುತೇಕ ವ್ಯಾಪಾರಿಗಳು, ಜೈನರು, ತಮಿಳರು ಈ ಕ್ಷೇತ್ರದಲ್ಲಿ ಇದ್ದಾರೆ.
ಆಖಾಡದಲ್ಲಿರುವ ಅಭ್ಯರ್ಥಿಗಳು ಎಷ್ಟು?:ಈ ಬಾರಿಯೂ ಬಿಜೆಪಿ ಹಾಲಿ ಶಾಸಕ ಉದಯ್ ಗರುಡಾಚಾರ್ ಅವರನ್ನೇ ಮತ್ತೊಮ್ಮೆ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಇತ್ತ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ರನ್ನು ಕಣಕ್ಕಿಳಿಸಿ ಶಕ್ತಿ ಪರೀಕ್ಷೆ ನಡೆಸುತ್ತಿದೆ. ಜೆಡಿಎಸ್ ಈ ಬಾರಿ ಇಮ್ರಾನ್ ಪಾಷಾರನ್ನು ಸ್ಪರ್ಧೆಗೆ ಇಳಿಸಿದೆ. ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ 8 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ತೀವ್ರ ಕುತೂಹಲ ಮೂಡಿಸಿದೆ. ಹೀಗಾಗಿ ಕ್ಷೇತ್ರದಲ್ಲಿ ಕಮಲ, ಕೈ, ತೆನೆ ಅಭ್ಯರ್ಥಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ನಡುವೆಯೇ, ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕಣದಲ್ಲಿರುವುದು ಇನ್ನಷ್ಟು ರೋಚಕತೆ ಮೂಡಿಸಿದೆ.
ಕ್ಷೇತ್ರ ರಾಜಕೀಯ ಲೆಕ್ಕಾಚಾರ ಏನು?:ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಾಮಾನ್ಯವಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಪೈಪೋಟಿ ಇರುತ್ತದೆ. ಆದರೆ, ಈ ಬಾರಿ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದರ ಜೊತೆಗೆ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಸ್ಪರ್ಧೆಯೂ ಕೂಡಾ ಚುನಾವಣಾ ಅಖಾಡದಲ್ಲಿ ಕೆಲ ತಿರುವು ಪಡೆಯುವ ಸಾಧ್ಯತೆಯಿದೆ.
ಕ್ಷೇತ್ರದಲ್ಲಿ ರಾಜಸ್ಥಾನ ಮತ್ತು ಗುಜರಾತಿನ ವ್ಯಾಪಾರಿಗಳು, ತೆಲುಗು ಮತ್ತು ತಮಿಳು ಭಾಷಿಗರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ವ್ಯಾಪಾರಿಗಳ ಜೊತೆ ಕೊಳಗೇರಿ ನಿವಾಸಿಗಳು ಇದ್ದಾರೆ. ಕಳೆದ ಮೂರು ಚುನಾವಣೆಗಳ ಫಲಿತಾಂಶ ನೋಡಿದಾಗ ಕ್ಷೇತ್ರದ ಮತದಾರರು ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತಿದ್ದಾರೆ. ಒಕ್ಕಲಿಗರು, ಬಲಿಜ, ತಿಗಳರು, ಪರಿಶಿಷ್ಟರು, ಮುಸ್ಲಿಮರು ಕ್ಷೇತ್ರದಲ್ಲಿ ನೆಲೆಸಿದ್ದಾರೆ.