ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲು ಪ್ರಾಯೋಗಿಕ ಓಡಾಟ ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಲೋಕಾರ್ಪಣೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದೀಗ ಬೆಂಗಳೂರು-ಧಾರವಾಡ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಓಡಾಟ ಇಂದು ಬೆಳಗ್ಗೆಯಿಂದ ಆರಂಭವಾಗಿದೆ. ಇಂದು ಬೆಳಗ್ಗೆ 5:45 ಕ್ಕೆ ಬೆಂಗಳೂರಿನಿಂದ ಈ ರೈಲು ಪ್ರಯಾಣ ಬೆಳಸಿತು.
ಬೆಂಗಳೂರಿಂದ 6 ಗಂಟೆ 55 ನಿಮಿಷಗಳ ಅಂತರದಲ್ಲಿ ಈ ರೈಲು ಧಾರವಾಡ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರು ನಗರದಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು ರಾತ್ರಿ 8:10ಕ್ಕೆ ಬೆಂಗಳೂರು ನಗರ ತಲುಪುವ ನಿರೀಕ್ಷೆಯಿದೆ.
ಇದನ್ನೂ ಓದಿ :ಮುಂದಿನ 3 ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್ ರೈಲುಗಳ ಸೇವೆ
ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 26ರಂದು ಅಧಿಕೃತವಾಗಿ ಚಾಲನೆ ನೀಡುವ ಮುನ್ನವೇ ಇಂದು ಪ್ರಾಯೋಗಿಕ ಚಾಲನೆ ನೀಡಲಾಗಿದೆ. ಎಂಟು ಬೋಗಿಗಳುಳ್ಳ ಮಿನಿ ವಂದೇ ಭಾರತ್ ಇದಾಗಿದೆ. ಹಾಗೆಯೇ, ಧಾರವಾಡ - ಬೆಂಗಳೂರು ಮಧ್ಯ ಸಂಚರಿಸುವ ರೈಲು ಮಧ್ಯಾಹ್ನ 12-10ಕ್ಕೆ ಹುಬ್ಬಳ್ಳಿಗೆ ಆಗಮಿಸಿ 12-15ಕ್ಕೆ ಧಾರವಾಡಕ್ಕೆ ಪ್ರಯಾಣ ಬೆಳೆಸಲಿದೆ.
ಇದನ್ನೂ ಓದಿ :ಜೂನ್ 26 ರಂದು ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲಿಗೆ ಪ್ರಧಾನಿ ಚಾಲನೆ
ವಾರದಲ್ಲಿ 6 ದಿನ ಸಂಚಾರ :ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹುಬ್ಬಳ್ಳಿಯ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಮೂಲಕ ಧಾರವಾಡ ರೈಲು ನಿಲ್ದಾಣದವರೆಗೆ ಅಂದ್ರೆ 487.47 ಕಿಲೋ ಮೀಟರ್ ಸಂಚರಿಸಲಿದೆ. ಮಂಗಳವಾರವನ್ನು ಹೊರತುಪಡಿಸಿ ಉಳಿದ ವಾರದ 6 ದಿನಗಳ ಕಾಲ ಪ್ರಯಾಣಿಕರಿಗೆ ಸೇವೆ ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಹಸಿರು ನಿಶಾನೆ
ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು : ಇನ್ನು ಕಳೆದ ಏಪ್ರಿಲ್ ತಿಂಗಳ 8 ನೇ ತಾರೀಖಿನಂದು ಹೈದರಾಬಾದ್ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಿಕಂದರಾಬಾದ್ - ತಿರುಪತಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಎರಡನೇ ವಂದೇ ಭಾರತ್ ರೈಲು ಇದಾಗಿದ್ದು, 3 ತಿಂಗಳ ಅಂತರದಲ್ಲಿ 2ನೇ ಸೆಮಿ ಹೈಸ್ಪೀಡ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭಗೊಂಡಿದೆ.
ಇದನ್ನೂ ಓದಿ :ಫೋಟೋ ತೆಗೆದುಕೊಳ್ಳಲು ವಂದೇ ಭಾರತ್ ರೈಲು ಹತ್ತಿ ಒಳಗೆ ಸಿಲುಕಿಕೊಂಡ ವ್ಯಕ್ತಿ .. ವಿಡಿಯೋ ವೈರಲ್