ಬೆಂಗಳೂರು: ಶಾಲಾ ಆವರಣದಲ್ಲಿರುವ ಮರಗಳನ್ನು ಕಡಿಯದಂತೆ ಆಗ್ರಹಿಸಿ ನಗರದ ಪೀಣ್ಯ ದಾಸರಹಳ್ಳಿಯ ಅಬ್ಬಿಗೆರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಅಪ್ಪಿಕೋ ಚಳವಳಿ ಮಾದರಿಯ ಪ್ರತಿಭಟನೆ ನಡೆಸುತ್ತಿದ್ದಾರೆ.
ರಸ್ತೆ ವಿಸ್ತರಿಸುವ ಸಲುವಾಗಿ ಬಿಬಿಎಂಪಿ, ಏಕಾಏಕಿ ಮರಗಳನ್ನು ಕಡಿಯಲು ಮುಂದಾಗಿದೆ. ಈ ಹಿನ್ನೆಲೆ ಅಬ್ಬಿಗೆರೆ ಸರ್ಕಾರಿ ಶಾಲಾ ಮಕ್ಕಳು ಕೈಯಲ್ಲಿ ನಾಮಫಲಕಗಳನ್ನು ಹಿಡಿದು, ಮರಗಳನ್ನು ಸುತ್ತುವರಿದು, ಕಡಿಯದಂತೆ ಮನವಿ ಮಾಡುತ್ತಿದ್ದಾರೆ.
ಅಬ್ಬಿಗೆರೆ ಸರ್ಕಾರಿ ಶಾಲೆ ಆವರಣದಲ್ಲಿ 100ಕ್ಕೂ ಹೆಚ್ಚು ಮರಗಳಿವೆ. ಅಬ್ಬಿಗೆರೆಯಿಂದ ಚಿಕ್ಕಬಾಣಾವರಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಲು ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ಮುಂದಾಗಿದ್ದಾರೆ. ಈ ಅಗಲೀಕರಣ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಮುಂದುವರೆಸದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡುತ್ತಿದ್ದಾರೆ.
20 ವರ್ಷದ ಮರಗಳು:
ಈ ಕುರಿತಂತೆ ಜಿಂದಾಲ್ ಜುಬ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಮತ್ತು ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಸ್ಥಳೀಯರನ್ನು ಈ ಟಿವಿ ಭಾರತದ ಪ್ರತಿನಿಧಿ ಮಾತನಾಡಿಸಿದ್ದಾರೆ.