ಬೆಂಗಳೂರು: ಮಾರ್ಚ್ನಲ್ಲಿ ರಾಜ್ಯಕ್ಕೆ ಕಾಲಿಟ್ಟ ಕೋವಿಡ್-19 ಈವರೆಗೆ ಒಟ್ಟು 21,549 ಜನರಿಗೆ ಹಬ್ಬಿದೆ. ಇದರಲ್ಲಿ 9,244 ಜನರು ಗುಣಮುಖರಾಗಿ ಮನೆಗೆ ಮರಳಿದರೆ,11,966 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 226 ಜನ ಐಸಿಯುನಲ್ಲಿದ್ದರೆ 335 ಜನರು ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಸೋತು ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿತರಿಗೆ ನೀಡುವ ಚಿಕಿತ್ಸೆ ಗುಣಮುಖರಾದ ಸೈಯದ್ ಮಾಹಿತಿ ಕೊರೊನಾ ರೋಗಿಗೆ ಹೇಗೆ ಚಿಕಿತ್ಸೆ: ಸಾಮಾನ್ಯವಾಗಿ ಮೊದಲು ಇಮ್ಯುನಿಟಿ(ರೋಗ ನಿರೋಧಕ ಶಕ್ತಿ) ಹೆಚ್ಚು ಮಾಡಲು ಪೂರಕವಾದ ಔಷಧಿ ನೀಡಲಾಗುತ್ತದೆ. ಪ್ರತಿ ದಿನ ಬೆಳಗ್ಗೆ ಹಾಗು ರಾತ್ರಿ ಮಾತ್ರೆಗಳನ್ನು ವೈದ್ಯರು ನೀಡುತ್ತಾರೆ. ಉತ್ತಮ ಗುಣಮಪಟ್ಟದ ಪೌಷ್ಠಿಕ ಆಹಾರ, ಹಾಲು, ಹಣ್ಣು ಮೊಟ್ಟೆ ಒದಗಿಸಲಾಗುತ್ತದೆ. ಶೀತ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದರೆ ಅದಕ್ಕೆ ಪೂರಕ ಚಿಕಿತ್ಸೆ ನೀಡಲಾಗುತ್ತದೆ ಎಂದು ಕೊರೊನಾದಿಂದ ಗುಣಮುಖರಾದ ಬೆಂಗಳೂರಿನ ಸೈಯದ್ ನಿಜಾಮುದ್ದೀನ್ ಎಂಬುವರು ಮಾತನಾಡಿದ್ದಾರೆ.
ಕೊರೊನಾ ಬಂದಿದೆ ಎಂದ ಕೂಡಲೇ ಸಾಕಷ್ಟು ಜನರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುವ ಕಾರಣಕ್ಕೆ ಮನೋರೋಗ ತಜ್ಞರಿಂದ ಕೌನ್ಸಿಲಿಂಗ್ ಮಾಡಿಸಲಾಗುತ್ತದೆ. ಜೊತೆಗೆ ಉಸಿರಾಟದ ತೊಂದರೆಯಾಗದಂತೆ ಪ್ರಾಣಾಯಾಮದಂತಹ ಕೆಲವೊಂದು ವ್ಯಾಯಾಮ ಹೇಳಿಕೊಡುತ್ತಾರೆ. ಈ ರೀತಿಯ ಜೀವನಶೈಲಿಯುಂದ ಇಮ್ಯುನಿಟಿ ಹೆಚ್ಚಾಗಿ ಐದಾರು ದಿನದಲ್ಲಿ ಸಾಮಾನ್ಯವಾಗಿ ಕೊರೊನಾ ಸೋಂಕಿತ ಬಹುಪಾಲು ವ್ಯಕ್ತಿಗಳ ವರದಿ ನೆಗಟಿವ್ ಬರುತ್ತದೆ. ನಂತರ ಅವರನ್ನು ಆಸ್ಪತ್ರೆಯಿಂದ ಬುಡುಗಡೆ ಮಾಡಲಾಗುತ್ತದೆ.
ಕೊರೊನಾದಿಂದ ಗುಣಮುಖರಾದವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಈ ಸಮಯದಲ್ಲಿಯೂ ಅವರು ಆಸ್ಪತ್ರೆಯಲ್ಲಿ ಇದ್ದ ರೀತಿಯ ದಿನಚರಿಯನ್ನೇ ಅನುಸರಿಸುತ್ತಾರೆ. ದಿನವೂ ಬಿಸಿ ನೀರು ಕುಡಿಯುವುದು ಉತ್ತಮವಾದ ಉಪಹಾರ ಹಾಗು ಊಟವನ್ನು ನಿಯಮಿತವಾಗಿ ಮಾಡುವುದು. ಆಹಾರದಲ್ಲಿ ಸಾಧ್ಯವಾದಷ್ಟು ಇಮ್ಯುನಿಟಿ ಹೆಚ್ಚಿಸುವಂತಹ ಪದಾರ್ಥಗಳ ಬಳಕೆ, ಸದಾ ಮಾಸ್ಕ್ ಧರಿಸಿರುವುದು, ಉಪ್ಪು ನೀರಲ್ಲಿ ಬಾಯಿ ಮುಕ್ಕಳಿಸುವುದು. ಆಗಾಗ ಕೈಗಳನ್ನು ಸೋಪಿನಿಂದ ತೊಳೆಯುತ್ತಿರಬೇಕು ಅಂತಾರೆ ಸೈಯದ್.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ನಿಜಾಮುದ್ದೀನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ಹಾಗೂ ಪತ್ನಿಗೆ ಕೊರೊನಾ ಸೋಂಕು ಬಂದಿತ್ತು. ಎಲ್ಲಾ ವೈದ್ಯರು ಹಾಗು ಸಿಬ್ಬಂದಿ ಸಹಾಯ ಮಾಡಿದರು. ಏನೂ ತೊಂದರೆ ಇಲ್ಲ, ಊಟಕ್ಕೆ ಯಾವುದಕ್ಕೂ ತೊದರೆ ಆಗಲಿಲ್ಲ. ಎಲ್ಲರೂ ಕೇರ್ ಮಾಡಿದರು. ಕೆಮ್ಮು, ಜ್ವರ ಏನೇ ಇದ್ದರೂ ತಿಳಿಸಿ ಎಂದು ಎಲ್ಲಾ ವೈದ್ಯರೂ ವಿಚಾರಿಸುತ್ತಿದ್ದರು. ಪತ್ನಿ ಗರ್ಭಿಣಿ ಜೊತೆಗೆ ಥೈರಾಯ್ಡ್ ಸಮಸ್ಯೆ ಇದೆ. ಸರಿಯಾಗಿ ನೋಡಿಕೊಂಡರು ಎಂದು ಎಲ್ಲಾ ವೈದ್ಯರಿಗೂ ಸಿಬ್ಬಂದಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ಬಂದ ಆರಂಭದಲ್ಲಿ ಸ್ವಲ್ಪ ಭಯವಾಯಿತು. ಏನಾಗುತ್ತೋ, ಐಸಿಯುನಲ್ಲಿ ಇಡುತ್ತಾರೋ, ವೆಂಟಿಲೇಟರ್ನಲ್ಲಿ ಇಡುತ್ತಾರೋ ಯಾವುದರ ಬಗ್ಗೆಯೂ ಗೊತ್ತಿರಲಿಲ್ಲ. ಆದರೆ ಆಸ್ಪತ್ರೆಗೆ ದಾಖಲಾದ ನಂತರ ಭಯ ಕಡಿಮೆಯಾಯಿತು. ಅಲ್ಲಿನ ವೈದ್ಯರು ತುಂಬಾ ಚೆನ್ನಾಗಿ ನೋಡಿಕೊಂಡರು. ಐದು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ಪ್ರತಿದಿನ ಮೂರು ಬಾರಿ ಉತ್ತಮವಾದ ಉಪಹಾರ ಹಾಗೂ ಊಟ ಕೊಡುತ್ತಿದ್ದರು. ಗಂಜಿ, ಹಣ್ಣು, ಮೊಟ್ಟೆ, ಹಾಲು, ಹಣ್ಣಿನ ರಸ ಊಟದ ನಂತರ ರಾತ್ರಿ ಬಾದಾಮಿ ಹಾಲು ನೀಡುತ್ತಿದ್ದರು. ಇದರಿಂದ ನಾನು ಗುಣಮುಖನಾಗಿ ಈಗ ನೆಮ್ಮದಿಯಿಂದ ಇದ್ದೇನೆ ಸೈಯದ್ ನಿಜಾಮುದ್ದೀನ್ ವಿವರಿಸಿದ್ದಾರೆ.
ಸದ್ಯ ಸೋಂಕಿನಿಂದ ಗುಣಮುಖರಾಗಿ ಬಂದವರನ್ನು ಅನುಮಾನದಿಂದ ನೋಡಲಾಗುತ್ತಿದೆ. ಇದು ತಪ್ಪು, ಎಲ್ಲರೂ ಅವರನ್ನು ಸಾಮಾನ್ಯರಂತೆ ಕಾಣಬೇಕು ಎಂದು ಅವರು ಮನವಿ ಮಾಡಿದ್ದಾರೆ.