ಬೆಂಗಳೂರು: ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಬರುವ ಬೆಂಗಳೂರಿನ 11 ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ.
ಸದ್ಯ ಇರುವ ಆಸ್ಪತ್ರೆಗಳ ಜೊತೆಯಲ್ಲಿ ಬೆಂಗಳೂರಿನ 11 ಮೆಡಿಕಲ್ ಕಾಲೇಜುಗಳು ಕೊರೊನಾ ಚಿಕಿತ್ಸೆ ನೀಡುವ ಸೌಲಭ್ಯ ಹೊಂದಿದ್ದು, ಒಟ್ಟು 2200 ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಇದರಲ್ಲಿ 281 ಬೆಡ್ಗಳು ಐಸಿಯು ಸೌಲಭ್ಯ ಹೊಂದಿದ್ದು, 120 ಬೆಡ್ಗಳು ಕೋವಿಡ್-19 ವೆಂಟಿಲೇಟರ್ ಸೌಲಭ್ಯ ಹೊಂದಿವೆ. 239 ಸಾಮಾನ್ಯ ವೆಂಟಿಲೇಟರ್ ಸೌಲಭ್ಯ ಹೊಂದಿವೆ. ಪ್ರತಿ ವೈದ್ಯಕೀಯ ಕಾಲೇಜು ಕೊರೊನಾ ಪರೀಕ್ಷಾ ಲ್ಯಾಬ್ ಹಾಗು ಕನಿಷ್ಠ ಎರಡು ಫೀವರ್ ಕ್ಲಿನಿಕ್ ಹೊಂದಿವೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಆದೇಶ ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು, ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು,ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು, ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ, ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು, ಎಂವಿಜೆ ಮೆಡಿಕಲ್ ಕಾಲೇಜು, ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸೇಂಟ್ ಜೋಸೆಫ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಆಕ್ಸ್ ಫರ್ಡ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ವೈದೇಹಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಆಸ್ಪತ್ರೆಗಳಲ್ಲಿ ತಲಾ 200 ಬೆಡ್ಗಳನ್ನು ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ.
ಇದರ ಜೊತೆ ಎಸ್‌ಡಿಎಸ್ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ 104 ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗೆ ಮೀಸಲಿಟ್ಟಿದೆ. 32 ಐಸಿಯು, 12 ಐಸಿಯು ಕೋವಿಡ್ ಬೆಡ್,12 ಸಾಮಾನ್ಯ ವೆಂಟಿಕೇಟರ್ ಬೆಡ್, 12 ಕೋವಿಡ್ ವೆಂಟಿಲೇಟರ್ ಬೆಡ್ ಇವೆ.
ಬೆಂಗಳೂರಿನಲ್ಲಿ ಕಳೆದ ಎರಡು ವಾರದಿಂದ ಪ್ರತಿ ದಿನ 100 ಕ್ಕೂ ಹೆಚ್ಚಿನ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾ ರೋಗಿಗಳಿಗೆ ಹಾಸಿಗೆ ಕೊರತೆ ಸೃಷ್ಟಿಯಾಗುವ ಆತಂಕ ವ್ಯಕ್ತವಾಗಿತ್ತು. ಕೊರೊನಾ ವಾರಿಯರ್ಸ್ ಕೂಡ ಬೆಡ್ ಇಲ್ಲದೇ ಕೊರೊನಾ ಪಾಸಿಟಿವ್ ಆದರೂ ಮನೆಯಲ್ಲೇ ಇದ್ದ ಬಗ್ಗೆ ಈಟಿವಿ ಭಾರತ ಕೂಡ ವರದಿ ಮಾಡಿತ್ತು. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇದೀಗ ಹೆಚ್ಚುವರಿಯಾಗಿ 2200 ಹಾಸಿಗೆ ಸೌಲಭ್ಯ ಖಾಸಗಿ ವೈದ್ಯಕೀಯ ಕಾಲೇಜುಗಳ ಮೂಲಕ ಕಲ್ಪಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ.