ಬೆಂಗಳೂರು: ದೇಶಾದ್ಯಂತ ಅಗ್ನಿಪಥ್ ನೇಮಕಾತಿ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ವೇಳೆ ಬಹುತೇಕ ಕಡೆ ಪ್ರತಿಭಟನೆಗಳು ಭುಗಿಲೆದ್ದು, ಹಿಂಸಾರೂಪಕ್ಕೆ ತಿರುಗಿವೆ. ಉತ್ತರ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೆ ತೆರಳಿದ್ದ ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 150ಕ್ಕೂ ಅಧಿಕ ಪ್ರವಾಸಿಗರು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದು, ಅವರ ಕಣ್ಣಲ್ಲಿ ಇಂದು ಕೃತಜ್ಞತಾ ಭಾವ ಕಂಡುಬಂತು.
ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಕಾಶಿ, ವಾರಣಾಸಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿದ್ದ ವೇಳೆ ಆ ಭಾಗದಲ್ಲಿ ಅಗ್ನಿಪಥ್ ವಿರೋಧಿಸಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದ್ದವು. ಇದರಿಂದ ಆತಂಕಕ್ಕೆ ಈಡಾಗಿದ್ದ ಪ್ರವಾಸಿಗರನ್ನು ಸರ್ಕಾರ ಅಬಕಾರಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ 164 ಪ್ರವಾಸಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತಂದಿದೆ.
ವಯೋವೃದ್ಧರು ಸೇರಿದಂತೆ ಸುರಕ್ಷಿತವಾಗಿ ಬುಧವಾರ ಬೆಂಗಳೂರಿಗೆ ಆಗಮಿಸಿದ 164ಕ್ಕೂ ಅಧಿಕ ಪ್ರವಾಸಿಗರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರದಲ್ಲಿ ಶಾಸಕರೂ ಆದ ಅಬಕಾರಿ ಸಚಿವ ಕೆ. ಗೋಪಾಲಯ್ಯ ಕಚೇರಿಗೆ ಮಧ್ಯಾಹ್ನ ಆಗಮಿಸಿದರು.