ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳು ಸೌರಮಂಡಲದ ಕೌತುಕವನ್ನು ಕಣ್ತುಂಬಿಕೊಳ್ಳಬೇಕು ಎಂದರೆ ಬೆಂಗಳೂರಿಗೆ ಇಲ್ಲವೆ ಮಂಗಳೂರಿಗೆ ಹೋಗಬೇಕು. ಇತ್ತ ಬಳ್ಳಾರಿಯ ತಾರಾಲಯಕ್ಕೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಹಾಗಾಗಿ ರಾಜ್ಯದ ಅನೇಕ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸೌರ ಅಧ್ಯಯನ ಗಗನ ಕುಸುಮವಾಗಿತ್ತು. ಆದರೆ, ಈಗ ಮಕ್ಕಳ ಕನಸಿನ ಸೌರಮಂಡಲವನ್ನು ಕಣ್ಮುಂದೆ ತರಲು ಸಂಚಾರಿ ತಾರಾಲಯ ಎಂಬ ಹೊಸ ಯೋಜನೆ ಪ್ರಾರಂಭವಾಗಿದೆ.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜಿಸಲು, ಸೌರಮಂಡಲದ ಕೌತುಕಗಳ ಕುರಿತು ಅರಿವು ಮೂಡಿಸುವ ಸಂಚಾರಿ ತಾರಾಲಯವೊಂದು ಶಾಲಾ ಅಂಗಳಕ್ಕೆ ಭೇಟಿ ನೀಡುತ್ತಿದೆ. ಡೈರಿ ಡೇ ಹಾಗೂ ಯುವ ಬೆಂಗಳೂರು ಟ್ರಸ್ಟ್ ಸಂಸ್ಥೆ ವತಿಯಿಂದ ಈ ಸಂಚಾರಿ ತಾರಾಲಯ ಅಭಿವೃದ್ಧಿಪಡಿಸಿದ್ದು, ಸರ್ಕಾರಿ ಶಾಲೆಗಳ ಮಕ್ಕಳನ್ನು ಕೇಂದ್ರಿಕರಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಸಂಚಾರಿ ತಾರಾಲಯಕ್ಕೆ ಚಾಲನೆ ನೀಡಿದ್ದಾರೆ.
ಇವುಗಳನ್ನು ನೋಡುತ್ತಿದ್ದರೆ ಬಾಲ್ಯದ ದಿನಗಳು ನೆನಪಾಗುತ್ತವೆ. ಪ್ರಯೋಗದಿಂದ ಸರ್ಕಾರಿ ಶಾಲಾ ಮಕ್ಕಳನ್ನು ವಿಜ್ಞಾನದತ್ತ ಸೆಳೆಯಲು ಇದು ತುಂಬಾ ಸಹಕಾರಿಯಾಗಿದೆ. ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಎಲ್ಲಾ ಅನಕೂಲತೆ ಮಾಡಿಕೊಡಲಿದೆ ಎಂದು ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.