ಧಾರವಾಡ: ಇಂದು ಹುಬ್ಬಳ್ಳಿಯಲ್ಲಿ ದೃಢಪಟ್ಟ ಕೊರೊನಾ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಲಾ ಓಣಿಯ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಲಭ್ಯವಾಗಿದೆ.
ಮಾರ್ಚ್ 16ರಂದು ಈ ವ್ಯಕ್ತಿ ಹುಬ್ಬಳ್ಳಿಯಿಂದ ಹೈದರಾಬಾದ್ಗೆ ವಿಆರ್ಎಲ್ ಬಸ್ ಮೂಲಕ ಪ್ರಯಾಣಿಸಿದ್ದ. ಮಾರ್ಚ್ 17ರಂದು ಬೆಳಿಗ್ಗೆ 5.30ಕ್ಕೆ ಹೈದರಾಬಾದ್ ತಲುಪಿದ್ದ. ಅಲ್ಲಿಂದ ಬೆಳಗ್ಗೆ 8.45ಕ್ಕೆ ವಿಮಾನದ ಮೂಲಕ ದೆಹಲಿ ತಲುಪಿದ್ದ.
ಮಾರ್ಚ್ 17ರಂದು ತಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಕೆಲಸ ಮುಗಿಸಿಕೊಂಡು ದೆಹಲಿಯಲ್ಲಿ ವಾಸ್ತವ್ಯ ಮಾಡಿದ್ದ. ಮಾರ್ಚ್ 18ರಂದು ಬೆಳಗ್ಗೆ 5.45ಕ್ಕೆ ದೆಹಲಿಯಿಂದ ಆಗ್ರಾಗೆ ಹೋಗಿದ್ದ. ಅದೇ ದಿನ ಸಂಜೆ 5.45ಕ್ಕೆ ಹೊರಟು ಗೋಮತಿ ಎಕ್ಸ್ಪ್ರೆಸ್ ರೈಲು ಮೂಲಕ ಸಂಜೆ 7ಕ್ಕೆ ದೆಹಲಿ ತಲುಪಿದ್ದ.
ಮಾರ್ಚ್ 19ರಂದು ಏರ್ ಏಷ್ಯಾ ವಿಮಾನದ ಮೂಲಕ ಬೆಳಗ್ಗೆ 5.50ಕ್ಕೆ ದೆಹಲಿಯಿಂದ ಹೊರಟು ಬೆಳಿಗ್ಗೆ 8.30ಕ್ಕೆ ಮುಂಬೈ ತಲುಪಿದ್ದ. ಅದೇ ದಿನ ರಾತ್ರಿ 9ಕ್ಕೆ ವಿಆರ್ಎಲ್ ಬಸ್ ಸಂಖ್ಯೆ MH09- EM3230 ಮೂಲಕ ಹೊರಟು ಮಾರ್ಚ್ 20ರಂದು ಬೆಳಗ್ಗೆ 8ಕ್ಕೆ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ತಲುಪಿ, ಅಲ್ಲಿಂದ ಆಟೋ ಮೂಲಕ ಮುಲ್ಲಾ ಓಣಿ ತಮ್ಮ ಮನೆಗೆ ಬಂದಿದ್ದ. ಈ ವ್ಯಕ್ತಿಯನ್ನು ಸಂಶಯಾಸ್ಪದ ಆಧಾರದ ಮೇಲೆ ಏಪ್ರಿಲ್ 4ರಂದು ಹೋಟೆಲ್ವೊಂದರಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು.
ಕೊರೊನಾ ಪಾಸಿಟಿವ್ ವ್ಯಕ್ತಿ ಪ್ರಯಾಣಿಸಿದ ವಿಮಾನ, ಬಸ್, ಆಟೋ ಹಾಗೂ ವ್ಯಕ್ತಿ ವಾಸ್ತವ್ಯದ ಸುತ್ತಮುತ್ತ ಪ್ರದೇಶದ ಸಾರ್ವಜನಿಕರಿಗೂ ತಗಲುವ ಸಾಧ್ಯೆತೆ ಇರುವುದರಿಂದ ಸಂಬಂಧಪಟ್ಟವರು ಕೂಡಲೇ ಕೊರೋನಾ ಸಹಾಯವಾಣಿ 104 ಅಥವಾ 1077ಕ್ಕೆ ಕರೆ ಮಾಡಿ ತಮ್ಮ ವಿವರ ಸಲ್ಲಿಸುವುದು ಹಾಗೂ ಕಡ್ಡಾಯವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.