ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಜಾರಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ರಾಮನಗರದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಶೇ. 8ರಷ್ಟು ಸಂಬಳ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿಲ್ಲ. ಕೂಡಲೇ ನೌಕರರು ಮುಷ್ಕರ ಕೈಬಿಡಬೇಕು ಎಂದು ಅವರು ಮನವಿ ಮಾಡಿದರು.
ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಜಾರಿಗೆ ಅವಕಾಶ ಇಲ್ಲ: ಡಿಸಿಎಂ ಅಶ್ವತ್ಥ್ ನಾರಾಯಣ
17:01 April 07
16:30 April 07
ಆರನೇ ವೇತನ ಆಯೋಗ ಜಾರಿಯಾದರೆ ಮುಷ್ಕರ ಕೈಬಿಡುತ್ತೇವೆ ಎಂದ ಕೆಎಸ್ಆರ್ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್
ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಲೇಬೇಕೆಂದು ಪಟ್ಟು ಹಿಡಿದಿರುವ ನೌಕರರು, ಸರ್ಕಾರ ಕೂಡಲೇ ಕ್ರಮ ಕೈಗೊಂಡ್ರೆ ನಾವು ಒಂದೇ ಗಂಟೆಯಲ್ಲಿ ಮುಷ್ಕರ ಕೈ ಬಿಡುತ್ತೇವೆ ಎಂದು ಕೆಎಸ್ಆರ್ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವುದಿಲ್ಲ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲೇಬೇಕು. ನಾಳೆ ಇನ್ನೂ ದೊಡ್ಡಮಟ್ಟದಲ್ಲಿ ಮುಷ್ಕರ ನಡೆಯಲಿದೆ. ಆರನೇ ವೇತನ ಆಯೋಗ ಜಾರಿಯಾದರೆ ಮುಷ್ಕರ ಕೈಬಿಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
13:19 April 07
ನೋ ವರ್ಕ್, ನೋ ಪೇ ನೋಟಿಸ್ ಜಾರಿ:
ಹಾಸನ: ಹಾಸನದಲ್ಲಿ ಪ್ರತಿಭಟನೆ ಯಶಸ್ವಿಯಾಗಿದೆ. ಇಂದಿನ ಪ್ರತಿಭಟನೆಯಿಂದ ಹಾಸನ ವಿಭಾಗಕ್ಕೆ 50 ರಿಂದ 60 ಲಕ್ಷ ರೂ. ಆದಾಯ ನಷ್ಟ ಉಂಟಾಗಿದೆ. ಪ್ರತಿನಿತ್ಯ 523 ಬಸ್‌ಗಳು ಹಾಸನ ವಿಭಾಗದಿಂದ ಬೇರೆ ಬೇರೆ ಜಿಲ್ಲೆಗಳಿಗೆ, ನಗರ ಹಾಗೂ ಹಾಸನ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳುತ್ತಿದ್ದವು. ಆದರೆ ಇಂದು ಮುಷ್ಕರ ಹಿನ್ನೆಲೆ ಎಲ್ಲಾ ಬಸ್‌ಗಳು ಡಿಪೋದಲ್ಲೇ ನಿಂತಿವೆ.
ಇಂದು ಯಾವೊಬ್ಬ ಸಿಬ್ಬಂದಿ ಕೊಡ ಕೆಲಸಕ್ಕೆ ಹಾಜರಾಗಿಲ್ಲ. ದೂರವಾಣಿ ಕರೆ ಮೂಲಕ ನಾವು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಬಹುತೇಕ ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಅವರನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಇವತ್ತು ಹಾಜರಾಗದ ಹಿನ್ನೆಲೆಯಲ್ಲಿ ನೋ ವರ್ಕ್, ನೋ ಪೇ ಎಂಬ ಅಡಿಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದರು.
12:58 April 07
ಮುಷ್ಕರ ಕೈಬಿಡುವಂತೆ ಮನವಿ:
ಬೆಂಗಳೂರು: ಸಾರಿಗೆ ಇಲಾಖೆಯ ನೌಕರರು ಜನರ ಹಿತವನ್ನು ಗಮನಿಸಿ ಮುಷ್ಕರ ಕೈಬಿಡಬೇಕು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರ ಒಟ್ಟು 9 ಬೇಡಿಕೆಗಳ ಪೈಕಿ 8 ನ್ನು ಈಗಾಗಲೇ ಈಡೇರಿಸಲಾಗಿದೆ. ಇನ್ನೊಂದು ಬೇಡಿಕೆಯ ಕುರಿತು ಪರಿಶೀಲಿಸಿ ರಾಜ್ಯದ ಉಪ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ನಿರ್ಧರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇದನ್ನು ಗಮನಿಸಿ ನೌಕರರು ಕೂಡಲೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
12:57 April 07
ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ:
ಕಲಬುರಗಿ: ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಪರೋಕ್ಷವಾಗಿ ಕೊಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದರು.
ಕಲಬುರಗಿಯಲ್ಲಿ ಮಾತನಾಡಿದ ಪಾಟೀಲ್, ಸಾರಿಗೆ ಇಲಾಖೆಯ ಬಗ್ಗೆ ಮಾಹಿತಿ ಇಲ್ಲದವರು ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಇಲಾಖೆಯ ಬಗ್ಗೆ ಮಾಹಿತಿ ಇರುವವರಿಗೆ ಹೋರಾಟದ ನೇತೃತ್ವ ವಹಿಸಿದ್ರೆ ಒಳ್ಳೆಯದು ಎಂದರು.
12:39 April 07
ಚಾಲಕರಿಗೆ ಸಾರ್ವಜನಿಕರಿಂದ ಸನ್ಮಾನ:
ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಈ ನಡುವೆಯೇ ಹಲವು ನೌಕಕರು ಸಾರ್ವಜನಿಕ ಸೇವೆಗೆ ಆಗಮಿಸಿದ್ದು, ಬಸ್ ಓಡಿಸುತ್ತಿದ್ದಾರೆ. ಬಿಎಂಟಿಸಿ ಚಾಲಕ ತ್ಯಾಗರಾಜ್ ಎಂಬುವರು ಕೆಲಸಕ್ಕೆ ಹಾಜರಾಗಿ ಮಧ್ಯಾಹ್ನದ ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸೇವೆ ಮಾಡುತ್ತಿರುವ ಚಾಲಕರಿಗೆ ಸನ್ಮಾನಿಸಲಾಯಿತು.
ಹೋಟೆಲ್ ಮಾಲೀಕ ಶ್ರೀಧರ್ ಭಟ್ಟ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ವೀರಣ್ಣ ಹಾಗೂ ಸಂಗಡಿಗರಿಂದ ಚಾಲಕನಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನ ಮಾಡಲಾಯಿತು.
12:21 April 07
ಕುಡಿದು ಗಲಾಟೆ ಮಾಡಿದ ಚಾಲಕ
ವಿಜಯಪುರ: ಕೆಎಸ್ಆರ್ಟಿಸಿ ಬಸ್ ಚಾಲಕನೊಬ್ಬ ಕುಡಿದು ಬಂದು ಗಲಾಟೆ ಮಾಡಿದ ಘಟನೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅರವಿಂದ ಕುಡಿದು ಬಂದು ಗಲಾಟೆ ಮಾಡಿದ ಕೆಎಸ್ಆರ್ಟಿಸಿ ಬಸ್ ಚಾಲಕ. ಆತನನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ನಿಲ್ದಾಣಕ್ಕೆ ಬಂದಾಗ ಅರವಿಂದ ರಂಪಾಟ ಮಾಡಿದ್ದಾನೆ. ಕೆಲ ಸಿಬ್ಬಂದಿ ಬಸ್ ಸಂಚಾರ ಪ್ರಾರಂಭಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಚಾಲಕ, ಎಲ್ಲರ ಜತೆ ವಾಗ್ವಾದ ನಡೆಸಿದನು.
12:21 April 07
ಸಂಚಾರ ಪ್ರಾರಂಭಿಸಿದ 5 ಬಸ್‌ಗಳು:
ಲಿಂಗಸುಗೂರು: ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಲಿಂಗಸುಗೂರು ಘಟಕದಿಂದ 73 ಬಸ್‌ಗಳ ಪೈಕಿ ಕೇವಲ 5 ಬಸ್‌ಗಳು ಮಾತ್ರ ರಸ್ತೆಗೆ ಇಳಿದಿವೆ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೊ ಎನ್ನುತ್ತಿದೆ.
ರಾಜ್ಯ ಸೇರಿದಂತೆ ತೆಲಂಗಾಣ, ಆಂಧ್ರ, ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಹಾಗೂ ನೂರಕ್ಕೂ ಹೆಚ್ಚು ಬಸ್ ಮತ್ತು ಸಹಸ್ರಾರು ಪ್ರಯಾಣಿಕರಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಬಿಕೊ ಎನ್ನುತ್ತಿದೆ. ಈ ಹಿನ್ನೆಲೆ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
12:02 April 07
ಸಾರಿಗೆ ನೌಕರನ ಏಕಾಂಗಿ ಪಾದಯಾತ್ರೆ:
ಹಾಸನ: 6ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದಿನಿಂದ ಸಾರಿಗೆ ಮುಷ್ಕರ ಆರಂಭಗೊಂಡಿದ್ದು, ಹಾಸನದಲ್ಲಿ ಸಾರಿಗೆ ನೌಕರನೊಬ್ಬ ವಿಭಿನ್ನವಾಗಿ ಮುಷ್ಕರ ಆರಂಭಿಸಿದ್ದಾರೆ.
ಅರಕಲಗೂಡು ಡಿಪೋದ ಚಾಲಕ ಕಂ ನಿರ್ವಾಹಕ ಪ್ರದೀಪ್ ತಮ್ಮ ಸ್ವಗ್ರಾಮ ಚನ್ನರಾಯಪಟ್ಟದಿಂದ ಬೆಳಗ್ಗೆ ಪಾದಯಾತ್ರೆ ಆರಂಭಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಡಿಪೋದಿಂದ ಏಕಾಂಗಿಯಾಗಿ ಬೆಂಗಳೂರಿನ ಸಿಎಂ ನಿವಾಸಕ್ಕೆ ಪಾದಯಾತ್ರೆ ಹೊರಟಿದ್ದಾರೆ.
12:02 April 07
ಸೆಕ್ಷನ್ 144 ಜಾರಿ:
ಕಲಬುರಗಿ:ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟವಧಿ ಮುಷ್ಕರದ ಹಿನ್ನೆಲೆ ಕಲಬುರಗಿ ಜಿಲ್ಲೆಯಾದ್ಯಂತ ಬಸ್ ಡಿಪೋ ಹಾಗೂ ಬಸ್ ನಿಲ್ದಾಣಗಳ ಬಳಿ 144 ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿವಿ ಜೋತ್ಸ್ಯಾ ಆದೇಶ ಹೊರಡಿಸಿದ್ದಾರೆ.
ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಜಿಲ್ಲೆಯಲ್ಲಿ ಸಹ ಮುಷ್ಕರದ ಕಾವು ಜೋರಾಗಿದೆ. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕೋವಿಡ್ ಎರಡನೇ ಅಲೆ ಹರಡುವಿಕೆ ತಡೆಯುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಆಳಂದ, ಅಫಜಲಪುರ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ, ಸೇಡಂ, ಕಾಳಗಿ ಬಸ್ ಡಿಪೋ ಹಾಗೂ ಬಸ್ ನಿಲ್ದಾಣಗಳ ಬಳಿ ರಾತ್ರಿ 10 ಗಂಟೆಯವರಗೆ ಸಿಆರ್ಪಿಸಿ ಕಾಯ್ದೆ 1973ರ ಅನ್ವಯ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಮುಷ್ಕರ ಸಂದರ್ಭದಲ್ಲಿ ಸಾರಿಗೆ ನಿಗಮದ ಆಸ್ತಿಪಾಸ್ತಿಗೆ ಹಾನಿ ಉಂಟಾದಲ್ಲಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
11:59 April 07
ಬಸ್ ಮಾಲೀಕರು-ಪೊಲೀಸರ ನಡುವೆ ಜಟಾಪಟಿ:
ಶಿವಮೊಗ್ಗ: ಸರ್ಕಾರಿ ಬಸ್ ಜಾಗದಲ್ಲಿ ಖಾಸಗಿ ಬಸ್‌ಗಳು ಸಂಚಾರ ಪ್ರಾರಂಭ ಮಾಡಿವೆ. ಇದರಿಂದಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂದೆ ಖಾಸಗಿ ಬಸ್ ನಿಲ್ಲಿಸಲು ಮುಂದಾದ ವೇಳೆ ಪೊಲೀಸರು ಬಸ್ ಅನ್ನು ಹಿಂದಕ್ಕೆ ನಿಲ್ಲಿಸುವಂತೆ ಹೇಳುತ್ತಿದ್ದಂತೆ ಪೊಲೀಸ್ ಹಾಗೂ ಖಾಸಗಿ ಬಸ್ ಮಾಲೀಕನೋರ್ವನ ನಡುವೆ ಮಾತಿನ ಜಟಾಪಟಿ ನಡೆಯಿತು.
ಪೊಲೀಸರು ನಮಗೆ ಏಕ ವಚನದಲ್ಲಿ ಬೈಯುತ್ತಾರೆ. ನಾವು ಜನ ಸೇವೆಗೆ ಬಂದಿರುವುದು. ನಮಗೆ ಈ ರೀತಿ ಬೈಯುವುದು ಯಾಕೆ? ಎಂದು ಪೊಲೀಸರ ವಿರುದ್ಧ ತಲ್ಕಿನ್ ಅಹಮದ್ ಜಗಳಕ್ಕೆ ನಿಂತರು. ಈ ವೇಳೆ ಟ್ರಾಫಿಕ್ ಪೊಲೀಸ್ ಹಾಗೂ ತಲ್ಕಿನ್ ಅಹಮದ್ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಧ್ಯೆ ಪ್ರವೇಶ ಮಾಡದ ದೊಡ್ಡಪೇಟೆ ಸಿಪಿಐ ಹರೀಶ್ ಪಟೇಲ್ ವಾಗ್ವಾದಕ್ಕೆ ಬ್ರೇಕ್ ಹಾಕಿದರು.
11:34 April 07
ಸರ್ಕಾರಿ ನೌಕರರ ಪರದಾಟ:
ಬೆಂಗಳೂರು: ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆ ಶಕ್ತಿಸೌಧ ತಲುಪಲು ಸಿಬ್ಬಂದಿ ಸಾಕಷ್ಟು ಪರದಾಟ ನಡೆಸಿದರು.
ವಿಧಾನಸೌಧ, ವಿಕಾಸಸೌಧ ಹಾಗೂ ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ತಲುಪಲು ಸಿಬ್ಬಂದಿ ಹರಸಾಹಸಪಟ್ಟರು. ಸ್ವಂತ ವಾಹನ ಉಳ್ಳವರು ಎಂದಿನಂತೆ ಆಗಮಿಸಿದರೆ, ಕೆಲವರು ಕ್ಯಾಬ್ ಹಾಗೂ ಆಟೋ ಮೂಲಕ ಆಗಮಿಸಿದರು.
11:34 April 07
ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ:
ರಾಯಚೂರು: ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.
ಜಿಲ್ಲೆಯ ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಏನೂ ಕೆಲಸವಿಲ್ಲದ ಹಿನ್ನೆಲೆ ರೈತರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಅದೇ ರೀತಿ ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
11:04 April 07
ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಬೇಡಿ: ಸಿಎಂ
ಬೆಳಗಾವಿ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ವಾಹನ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಬೇಡಿ ಎಂದು ಖಾಸಗಿ ಬಸ್ ಮಾಲೀಕರಿಗೆ ಮನವಿ ಮಾಡುತ್ತೇನೆ. ಸಾರಿಗೆ ನೌಕರರ 9 ಬೇಡಿಕೆ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಹಠಕ್ಕೆ ಬಿದ್ದು ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ಮಾಡುತ್ತಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಗೊತ್ತಿದ್ದರೂ ಸ್ವಾರ್ಥಕ್ಕಾಗಿ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರ ಉದ್ದೇಶಪೂರ್ವಕವಾಗಿದೆ ಎಂದೆನಿಸುತ್ತಿದೆ. ಕೂಡಲೇ ಸಾರಿಗೆ ನೌಕರರು ಸತ್ಯಾಗ್ರಹ ಕೈಬಿಡಬೇಕು. ಮುಷ್ಕರ ಕೈ ಬಿಟ್ಟರೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಹೀಗೆ ಮುಂದುವರೆದರೆ ನಾಳೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
10:55 April 07
ಸಸ್ಪೆಂಡ್ ರಿವೋಕ್ ಅಸ್ತ್ರ ಪ್ರಯೋಗ:
ಕೊಪ್ಪಳ: ಮುಷ್ಕರದಿಂದಾಗಿ ಕಂಗೆಟ್ಟಿರುವ ಸಾರಿಗೆ ಸಂಸ್ಥೆಯ ಕೊಪ್ಪಳದ ವಿಭಾಗೀಯ ಅಧಿಕಾರಿಗಳು ಸಸ್ಪೆಂಡ್ ರಿವೋಕ್ ಅಸ್ತ್ರ ಪ್ರಯೋಗಿಸಿ ಒಂದೊಂದೆ ಬಸ್ ಅನ್ನು ರಸ್ತೆಗಿಳಿಸುತ್ತಿದ್ದಾರೆ. ಸಸ್ಪೆಂಡ್ ಆಗಿರುವ ಸಿಬ್ಬಂದಿ ಕರೆಯಿಸಿ ಒಂದೊಂದೆ ಬಸ್ ಅನ್ನು ರಸ್ತೆಗೆ ಇಳಿಸುತ್ತಿದ್ದಾರೆ. ವಿವಿಧ ಕಾರಣಗಳಿಗೆ ಸಸ್ಪೆಂಡ್ ಆಗಿರುವ ಚಾಲಕರು, ನಿರ್ವಾಹಕರು ಹಾಗೂ ಚಾಲಕ ಕಂ ನಿರ್ವಾಹಕರಿಗೆ ಅಮಾನತ್ತು ಹಿಂಪಡೆದು ಕರ್ತವ್ಯಕ್ಕೆ ಕರೆಸಿಕೊಳ್ಳುತ್ತಿದ್ದಾರೆ.
ಸಸ್ಪೆಂಡ್ ಆದ ಕೆಲ ಸಿಬ್ಬಂದಿ ರಿವೋಕ್ ಆಗುತ್ತದೆಯಲ್ಲ ಎಂಬ ಕಾರಣದಿಂದ ಅನಿವಾರ್ಯವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈ ಮೂಲಕ ಸಂಸ್ಥೆಯ ಅಧಿಕಾರಿಗಳು ಮುಷ್ಕರ ನಿರತ ಸಿಬ್ಬಂದಿಗೆ ಶಾಕ್ ನೀಡುತ್ತಿದ್ದಾರೆ.
10:54 April 07
ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಸಾರಿಗೆ ಮುಷ್ಕರದಿಂದ ಮಂಗಳೂರಿನಲ್ಲಿ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬಿದ್ದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಪ್ರಾಬಲ್ಯವಿದೆ. ಇಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಯವರೆಗೆ ಮೈಸೂರು ಮತ್ತು ಮುಡಿಪುಗೆ ಎರಡು ಬಸ್ ಪ್ರಯಾಣ ಬೆಳೆಸಿದೆ. ಜೊತೆಗೆ ಖಾಸಗಿ ಬಸ್‌ಗಳ ಓಡಾಟ ಜೋರಾಗಿದೆ.
10:53 April 07
ದುಪ್ಪಟ್ಟು ಹಣ ಪಡೆದರೆ ಸ್ಥಳೀಯ ಅಧಿಕಾರಿಗೆ ದೂರು:
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಸರ್ಕಾರ ಖಾಸಗಿ ಬಸ್ಗಳನ್ನು ರಸ್ತೆಗಿಳಿಸಿದೆ. ಈ ಹಿನ್ನೆಲೆ ಮೆಜೆಸ್ಟಿಕ್ ನಿಲ್ದಾಣದೊಳಗೆ ಖಾಸಗಿ ಬಸ್‌ಗಳು ಲಗ್ಗೆಯಿಟ್ಟಿದ್ದು, ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ಎಲ್ಲಾ ಭಾಗಗಳಿಗೂ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಇದಕ್ಕೆ ಅವಕಾಶವನ್ನು ಆರ್ಟಿಒ ನೀಡಿದೆ.
ಸಾರಿಗೆ ಇಲಾಖೆ ಅಪರ ಆಯುಕ್ತ ನರೇಂದ್ರ ಹೋಳ್ಕರ್ ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಕುಂದು ಕೊರತೆಯನ್ನು ವಿಚಾರಿಸಿದರು. ಇದೇ ವೇಳೆ ಮಾತಾನಾಡಿದ ಅವರು, ಖಾಸಗಿ ಬಸ್ಗಳಲ್ಲಿ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅದು ನಮ್ಮ ಗಮನಕ್ಕೆ ಇನ್ನೂ ಬಂದಿಲ್ಲ. ಆ ರೀತಿಯಾ ವಿಷಯ ನಮ್ಮ ಗಮನಕ್ಕೆ ಬಂದ್ರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಾ ಭಾಗದಲ್ಲೂ ನಮ್ಮ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದರು.
10:24 April 07
ವಿದ್ಯಾರ್ಥಿಗಳ ಪರದಾಟ:
ಗದಗ: ಬಸ್ ಮುಷ್ಕರ ಹಿನ್ನೆಲೆಯಲ್ಲಿ ಕಾಲೇಜಿಗೆ ಹೋಗಲು ಬಸ್ ಇಲ್ಲದಿರುವುದಕ್ಕೆ ವಿದ್ಯಾರ್ಥಿಗಳು ಕೆಲ ಕಾಲ ಪರದಾಟ ನಡೆಸಿದರು. ಗದಗ ಹೊಸ ಬಸ್ ನಿಲ್ದಾಣದಲ್ಲಿ ಜಿಮ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜ್ಗೆ ತೆರಳಲು ಪರದಾಡಿದರು. ನಂತರ ಆಟೋಕ್ಕೆ ದುಬಾರಿ ಹಣ ಕೊಟ್ಟು ಮರಳಿ ಹಾಸ್ಟೆಲ್ಗೆ ತೆರಳಿದರು.
10:23 April 07
ಪ್ರಯಾಣಿಕರಿಗೆ ತಟ್ಟಿದ ಮುಷ್ಕರದ ಬಿಸಿ:
ಯಾದಗಿರಿ: ಜಿಲ್ಲೆಯಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಯಾದಗಿರಿಯಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಯಾದಗಿರಿ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಕೇವಲ ತೆಲಂಗಾಣ ಬಸ್‌ಗಳು ಮಾತ್ರ ಸಂಚಾರ ಮಾಡುತ್ತಿವೆ. ಬಸ್ ಸೌಕರ್ಯ ಇಲ್ಲದ ಪರಿಣಾಮ ಪ್ರಯಾಣಿಕರು ಊರಿಗೆ ತೆರಳಲು ಪರದಾಡುವಂತಾಗಿದ್ದು, ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.
10:22 April 07
ಮುಷ್ಕರದ ನಡುವೆಯೂ ರಸ್ತೆಗಿಳಿದ ಬಸ್
ಗದಗ: ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದರೂ ಸಹ ಕೆಎಸ್ಆರ್ಟಿಸಿ ಬಸ್ ಫೀಲ್ಡಿಗಿಳಿದಿದೆ. ಗದಗ ನಗರದ ಹೊಸ ಬಸ್ ನಿಲ್ದಾಣಕ್ಕೆ ಹೊಸಪೇಟೆ ಘಟಕದ ಬಸ್ ಪ್ರಯಾಣಿಕರನ್ನು ಹೊತ್ತು ತಂದಿದೆ.
ನಿನ್ನೆ ಹುಬ್ಬಳ್ಳಿಗೆ ತೆರಳಲಾಗಿತ್ತು. ಹೀಗಾಗಿ ಇಂದು ಮರಳಿ ಹೊಸಪೇಟೆಗೆ ತೆರಳುತ್ತಿದ್ದೇವೆ. ಇಂದು 10 ಗಂಟೆಗೆ ನಮ್ಮ ಶಿಫ್ಟ್ ಮುಗಿಯಲಿದೆ ಅಂತ ಚಾಲಕ ಮತ್ತು ನಿರ್ವಾಹಕ ಹೇಳಿದ್ದಾರೆ.
10:03 April 07
ಸಾರಿಗೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ
ಬೆಳಗಾವಿ: ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಇಲಾಖೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ಡಿಸಿ ಎಂ.ಆರ್.ಮುಂಜಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಯಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ಹೀಗಾಗಿ ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಬೇಕು. ನಿಮ್ಮ ಬೇಡಿಕೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಈಡೇರಿಸಲಿದೆ. ಕೋವಿಡ್, ಚುನಾವಣಾ ಇರುವ ಕಾರಣ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
10:03 April 07
ಬಸ್ಗಾಗಿ ಕಾದು ಕುಳಿತ ವಿಶೇಷಚೇತನ ವ್ಯಕ್ತಿ ಸಾವು:
ಬೆಂಗಳೂರು: ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ಕುಳಿತಿದ್ದ ವಿಶೇಷಚೇತನ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಶವ ಶಿಫ್ಟ್ ಮಾಡಲಾಗಿದೆ.
ಜಿಗಣಿಯಿಂದ ಬಂದಿದ್ದ ಚನ್ನಪ್ಪ ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಟೀ ಕುಡಿದು ಕೂಳಿತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ವ್ಯಕ್ತಿಯ ಅಳಿಯನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಚಿರಶಾಂತಿ ವಾಹನದಲ್ಲಿ ವ್ಯಕ್ತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
09:48 April 07
ಕೊಡಗು: ಮಡಿಕೇರಿಯಲ್ಲಿ ಸರ್ಕಾರಿ ಬಸ್ ಸಂಚಾರ ಸ್ತಬ್ಧಗೊಂಡಿದೆ. ಡಿಪೋಗಳಲ್ಲಿ ಸಿಬ್ಬಂದಿ ಬಸ್ ನಿಲ್ಲಿಸಿದ್ದು, ಬಸ್ ನಿಲ್ದಾಣದ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
09:47 April 07
ಈ ಸಮಯದಲ್ಲಿ ಬಂದ್ ಬೇಡವಾಗಿತ್ತು: ಸುರೇಶ್ ಕುಮಾರ್
ವಿಜಯಪುರ: 6ನೇ ವೇತನ ಆಯೋಗ ಜಾರಿ ಮಾಡಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಈ ಸಮಯದಲ್ಲಿ ಬೇಡವಾಗಿತ್ತು. ಈಗಾಗಲೇ ರಾಜ್ಯ ದೊಡ್ಡ ದೊಡ್ಡ ಸವಾಲು ಎದುರಿಸುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕರರ ಜತೆ ಮಾತನಾಡಿದ್ದು, ಮೇ 4ರ ನಂತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿದೆ. ಕೂಡಲೇ ಮುಷ್ಕರ ಹಿಂಪಡೆಯಬೇಕು. 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿವೆ. ರಾಜ್ಯ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದರು.
09:47 April 07
ಮುಷ್ಕರಕ್ಕೆ ಎಸ್.ಆರ್. ಪಾಟೀಲ್ ಬೆಂಬಲ:
ಬೆಂಗಳೂರು: ಸಾರಿಗೆ ನೌಕರರು ಇಂದು ಕರೆ ಕೊಟ್ಟಿರುವ ಮುಷ್ಕರಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, 6ನೇ ವೇತನ ಆಯೋಗ ಜಾರಿ ಸಂಬಂಧ ಸಾರಿಗೆ ನೌಕರರು ಇಟ್ಟಿರುವ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಹಾಗಾಗಿ ಮಾತು ತಪ್ಪಿದ ಸರ್ಕಾರದ ವಿರುದ್ಧ ಇಂದಿನಿಂದ ಮುಷ್ಕರ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. 6ನೇ ವೇತನ ಆಯೋಗ ಜಾರಿ ಬಗ್ಗೆ ಲಿಖಿತ ರೂಪದ ಭರವಸೆ ನೀಡಿದ್ದ ಸರ್ಕಾರ, ಇದೀಗ ಚುನಾವಣಾ ನೀತಿ ಸಂಹಿತೆ ನೆಪ ಹೇಳುತ್ತಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿನಿತ್ಯ 30 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಸಾರಿಗೆ ಮುಷ್ಕರದಿಂದ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಸಾರಿಗೆ ನೌಕರರನ್ನು ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
09:46 April 07
ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಎಂಟ್ರಿ:
ಚಾಮರಾಜನಗರ: ಕೆಎಸ್ಆರ್ಟಿಸಿ ನೌಕರರ ಮುಷ್ಕರಕ್ಕೆ ಚಾಮರಾಜನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಕೆಎಸ್ಆರ್ಟಿಸಿ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.
ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದು, ಖಾಸಗಿ ಬಸ್, ಕಾರು, ವ್ಯಾನ್ಗಳಲ್ಲಿ ಪ್ರಯಾಣಿಕರು ಮೈಸೂರು, ಬೆಂಗಳೂರು ಹಾಗೂ ಕೊಳ್ಳೇಗಾಲದತ್ತ ಪ್ರಯಾಣ ನಡೆಸುತ್ತಿದ್ದಾರೆ.
ಇನ್ನು ಮಂಗಳವಾರವೇ ಅರ್ಧದಷ್ಟು ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಶಿವಮೊಗ್ಗಕ್ಕೆ ತೆರಳಲು ಬಸ್ ಇಲ್ಲದೆ ರಾತ್ರಿಯಿಡಿ ಪ್ರಯಾಣಿಕರು ಕಾದು ಕುಳಿತಿದ್ದರು. ಇಂದು ಬೆಳಗ್ಗೆ ಖಾಸಗಿ ಬಸ್ನಲ್ಲಿ ಊರಿಗೆ ತೆರಳಿದರು.
09:28 April 07
ಖಾಸಗಿ ಬಸ್ ಸಂಚಾರ ಪ್ರಾರಂಭ:
ಶಿವಮೊಗ್ಗ: ಕೆಎಸ್ಆರ್ಟಿಸಿ ನೌಕರರು 6ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಸಂಚಾರ ಪ್ರಾರಂಭಿಸಿವೆ. ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ನಿಲ್ದಾಣ ಅಕ್ಕಪಕ್ಕದಲ್ಲಿಯೇ ಇರುವುದರಿಂದ ಖಾಸಗಿ ಬಸ್ ಸಂಚಾರಿಸಲು ಜಿಲ್ಲಾಡಳಿತ ಹಾಗೂ ಆರ್ಟಿಒ ಅನುಮತಿ ನೀಡಿದೆ. ಇದರಿಂದಾಗಿ ಬೆಂಗಳೂರು, ಅರಸಿಕೆರೆ, ಹುಬ್ಬಳ್ಳಿ, ಹರಿಹರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಮಾಡುವ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಸಂಚಾರ ಮಾಡುತ್ತಿವೆ.
09:27 April 07
ಸಿಬ್ಬಂದಿ ಮನವೊಲಿಕೆಗೆ ಯತ್ನ:
ಕೋಲಾರ: ಕೆಲಸಕ್ಕೆ ಹಾಜರಾಗುವಂತೆ ಸಿಬ್ಬಂದಿ ಮನವೊಲಿಸುವ ಕೆಲಸ ಮಾಡುತ್ತಿರುವುದಾಗಿ ಕೋಲಾರದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹೇಳಿದ್ದಾರೆ.
ಕೋಲಾರದ ಬಸ್ ನಿಲ್ದಾಣದಲ್ಲಿ ಮಾತನಾಡಿದ ಚಂದ್ರಶೇಖರ್, ಸಿಬ್ಬಂದಿ ಮನವೊಲಿಸುವ ಕೆಲಸದಲ್ಲಿ ಹಿರಿಯ ಅಧಿಕಾರಿಗಳು ತೊಡಗಿದ್ದಾರೆ. ಸರ್ಕಾರದ ಆದೇಶದಂತೆ ಅಗತ್ಯಕ್ಕೆ ತಕ್ಕಂತೆ ಖಾಸಗಿ ಬಸ್ಗಳನ್ನು ಬಳಕೆ ಮಾಡಿಕೊಳ್ಳುವಂತೆ ಪ್ರಾದೇಶಿಕ ಅಯುಕ್ತರು ತಿಳಿಸಿದ್ದಾರೆ. ಎಸ್ಮಾ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಗೈಡ್ಲೈನ್ಸ್ ಸಿಕ್ಕರೆ ಕ್ರಮ ಕೈಗೊಳ್ಳುತ್ತೆವೆಂದರು.
09:27 April 07
ರಾಯಚೂರು: ಬಸ್ ಇಲ್ಲದ ಹಿನ್ನೆಲೆ ಜನರು ಖಾಸಗಿ ವಾಹನಗಳ ಮೊರೆ ಹೋಗಿದ್ದು, ದುಪ್ಪಟ್ಟು ಹಣವನ್ನು ಪ್ರಯಾಣಿಕರಿಂದ ಪಡೆಯುತ್ತಿದ್ದಾರೆ. ಆಂಧ್ರದಿಂದ ಸಂಚರಿಸುವ ಬಸ್‌ಗಳು ಎಂದಿನಂತೆ ಸಂಚರಿಸುತ್ತಿದ್ದು, ಮುಷ್ಕರದ ಬಿಸಿ ತಟ್ಟಿಲ್ಲ. ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
09:27 April 07
ಖಾಸಗಿ ವಾಹನಗಳ ಮಾಲೀಕರಿಗೆ ಎಚ್ಚರಿಕೆ:
ಮಂಡ್ಯ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ವಾಹನಗಳ ಮಾಲೀಕರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಮಂಡ್ಯದ ಬಸ್ ನಿಲ್ದಾಣದ ಬಳಿ ನಿಂತಿರುವ ಖಾಸಗಿ ವಾಹನಗಳ ಮಾಲೀಕರಿಗೆ ಮಂಡ್ಯ ಪಶ್ಚಿಮ ಠಾಣೆ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಎಚ್ಚರಿಕೆ ನೀಡಿದರು. ಬೆಂಗಳೂರಿಗೆ ಮಾತ್ರ ಜನರನ್ನು ಹತ್ತಿಸಿಕೊಳ್ಳುವಂತಿಲ್ಲ. ಮದ್ದೂರು, ಚನ್ನಪಟ್ಟಣ, ರಾಮನಗರ ಬಳಿ ಸ್ಟಾಪ್ ಕೊಡಬೇಕು ಎಂದು ಎಚ್ಚರಿಸಿದರು.
09:07 April 07
ಹಾವೇರಿ: ಸಾರಿಗೆ ನೌಕರರ ಬಂದ್ಗೆ ಹಾವೇರಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬಸ್ಗಳಿಲ್ಲದೆ ಕೇಂದ್ರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಈ ಮಧ್ಯೆ ಖಾಸಗಿ ವಾಹನಗಳು ಹಾವೇರಿ ಬಸ್ ನಿಲ್ದಾಣದ ಮುಂದೆ ಸಾಲುಗಟ್ಟಿ ನಿಂತಿವೆ.
09:07 April 07
ಖಾಸಗಿ ಬಸ್‌ಗಳ ದರ್ಬಾರು:
ಮಂಡ್ಯ: ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದು, ಬಸ್ ನಿಲ್ದಾಣದ ಮುಂಭಾಗ ಖಾಸಗಿ ಬಸ್‌ಗಳ ದರ್ಬಾರು ಮುಂದುವರೆದಿದೆ. ಬೆರಳೆಣಿಕೆಯಷ್ಟು ಪ್ರಯಾಣಿಕರು ಖಾಸಗಿ ಬಸ್ ಮೊರೆ ಹೋಗಿದ್ದಾರೆ. ಖಾಸಗಿ ಬಸ್‌ಗಳು ದುಪ್ಪಟ್ಟು ದರ ನಿಗದಿ ಮಾಡಿದ್ದು, ಬೆಂಗಳೂರಿಗೆ ಕೆಎಸ್ಆರ್ಟಿಸಿ ದರ 90 ರೂ. ಇದ್ರೆ ಖಾಸಗಿ ಬಸ್ ದರ 150 ರಿಂದ 180 ಮಾಡಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ್ದಾರೆ.
09:07 April 07
ಬಿಗಿ ಪೊಲೀಸ್ ಬಂದೋಬಸ್ತ್:
ಮೈಸೂರು: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಬ್‌ಅರ್ಬನ್ ಬಸ್ ನಿಲ್ದಾಣದ ಬಳಿ ಸಾಲುಗಟ್ಟಿ ಖಾಸಗಿ ಬಸ್‌ಗಳು ನಿಂತಿದ್ದು, ಬೆಂಗಳೂರು, ಹಾಸನ, ಮಡಿಕೇರಿಗೆ ತೆರಳುವ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ತಮಿಳುನಾಡು, ಕೇರಳದ ಸರ್ಕಾರಿ ಬಸ್‌ಗಳು ಮಾತ್ರ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದು, ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
08:59 April 07
ಬಿಎಂಟಿಸಿ ರಾಜ್ಯ ರಸ್ತೆ ಸಾರಿಗೆ ಸ್ತಬ್ಧ:
ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಈ ಹಿನ್ನೆಲೆ ಪ್ರಯಾಣಿಕರಿಗಾಗಿ ಸಾಲುಗಟ್ಟಿ ಖಾಸಗಿ ಬಸ್‌ಗಳು ನಿಂತಿದ್ದು, ದುಪ್ಪಟ್ಟು ದರ ಪಡೆಯುತ್ತಿದ್ದಾರೆ. ಮೈಸೂರಿಗೆ ಸಾರಿಗೆ ಬಸ್ ದರ 145 ರೂ. ಇದ್ದರೆ, ಪ್ರಯಾಣಿಕರಿಂದ ಖಾಸಗಿ ಬಸ್ ಮಾಲೀಕರು 300-400 ರೂ. ದರ ಪಡೆಯುತ್ತಿದ್ದಾರೆ. ಜೊತೆಗೆ ಮುಷ್ಕರದ ಹಿನ್ನೆಲೆ ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸಾಲುಗಟ್ಟಿನಿಂತಿರುವುದು ಕಂಡು ಬಂದಿತು.
08:57 April 07
ಹಾಸನ: ಭಾರತದ ಅತಿ ದೊಡ್ಡ ಬಸ್ ನಿಲ್ದಾಣ ಎಂದೇ ಹೆಸರುವಾಸಿಯಾಗಿರುವ ಹಾಸನ ಬಸ್ ನಿಲ್ದಾಣ ಇಂದು ಬಸ್ ಹಾಗೂ ಪ್ರಯಾಣಿಕರಿಲ್ಲದೆ ಬಣಗುಡುತ್ತಿದೆ. ಬಂದ್ಗೆ ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಖಾಸಗಿ ವಾಹನಗಳ ದರ್ಬಾರು ಜೋರಾಗಿದೆ. ಜೊತೆಗೆ ನಗರದಲ್ಲಿ ಖಾಸಗಿ ಬಸ್‌ಗಳು ಮತ್ತು ಟೆಂಪೋಗಳು ಸಾಲುಗಟ್ಟಿ ನಿಂತಿವೆ.
08:56 April 07
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಟ್ಟಿದ ಸಾರಿಗೆ ಮುಷ್ಕರ:
ದೇವನಹಳ್ಳಿ: 6ನೇ ವೇತನ ಅಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಇಂದು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿಲ್ಲ. ಹಾಗಾಗಿ ಪ್ರಯಾಣಿಕರು ದುಪ್ಪಟ್ಟು ಹಣ ಕೊಟ್ಟು ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದ್ದು, ದಿನಕ್ಕೆ 300 ಟ್ರಿಪ್ ವಾಯುವಜ್ರ ಬಸ್ಗಳುವಿಮಾನ ನಿಲ್ದಾಣದಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದವು. ಸದ್ಯಕ್ಕೆ ವಿಮಾನ ನಿಲ್ದಾಣದಲ್ಲಿ ಬಸ್ಗಳಿಲ್ಲದೆ ಪ್ರಯಾಣಿಕರು ದುಪ್ಪಟ್ಟು ಹಣ ಕೊಟ್ಟು ಖಾಸಗಿ ವಾಹನಗಳಲ್ಲಿ ಹೋಗುತ್ತಿದ್ದಾರೆ.
08:39 April 07
ಬಸ್ ನಿಲ್ದಾಣಕ್ಕೆ ಆಗಮಿಸದ ಪ್ರಯಾಣಿಕರು:
ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧ ಗೊಂಡಿದೆ. ಧಾರವಾಡ ಹೊಸ ಬಸ್ ನಿಲ್ದಾಣ, ಸಿಬಿಟಿ, ಗ್ರಾಮಾಂತರ ಬಸ್ ನಿಲ್ದಾಣ ಬಿಆರ್ಟಿಎಸ್ ಬಸ್ ನಿಲ್ದಾಣದ ಬಿಕೋ ಎನ್ನುತ್ತಿವೆ. ಬಸ್ ಬಂದ್ ಹಿನ್ನೆಲೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿಲ್ಲ.
ಬಸ್ ಸಂಚಾರ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಖಾಸಗಿ ವಾಹನಗಳು ಬೆಳಗ್ಗೆಯಿಂದಲೇ ರಸ್ತೆಗಿಳಿದಿವೆ.
08:38 April 07
ಕೋಲಾರಕ್ಕೂ ತಟ್ಟಿದ ಮುಷ್ಕರದ ಬಿಸಿ:
ಕೋಲಾರ: ಇಂದಿನ ಸಾರಿಗೆ ನೌಕರರ ಮುಷ್ಕರದ ಬಿಸಿ ಜಿಲ್ಲೆಗೂ ತಟ್ಟಿದೆ. ಇಂದು ಮುಂಜಾನೆಯಿಂದಲೇ ಬಸ್ ನಿಲ್ದಾಣಕ್ಕೆ ಒಂದೂ ಸಾರಿಗೆ ಬಸ್ ಬಾರದೆ ನಿಲ್ದಾಣದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ಏಳು ಗಂಟೆಯಾದ್ರೂ ಸಾರಿಗೆ ಬಸ್ ನಿಲ್ದಾಣಕ್ಕೆ ಬಾರದ ಹಿನ್ನೆಲೆ, ಬಸ್ ನಿಲ್ದಾಣದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇನ್ನು ಸೂಕ್ತ ಬಸ್ ವ್ಯವಸ್ಥೆ ಇಲ್ಲದ ಕಾರಣ ಕೆಲ ಕಾಲ ಅಧಿಕಾರಿಗಳು ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯಿತು.
08:38 April 07
ದುಪ್ಪಟ್ಟು ದರ ವಸೂಲಿ:
ಮುದ್ದೇಬಿಹಾಳ: ರಾಜ್ಯಾದ್ಯಂತ ಬಸ್ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಮಾಲೀಕರು ಇದರ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಬಸ್ ಇಲ್ಲದ ಹಿನ್ನೆಲೆ ಪರದಾಡುವಂತಾಯಿತು. ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲಾ ಕೇಂದ್ರಗಳಿಗೆ ಹೋಗುವ ಪ್ರಯಾಣಿಕರು ದುಪ್ಪಟ್ಟು ದರ ಪಾವತಿಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಯಪುರ, ಬಾಗಲಕೋಟೆಗೆ 97 ರೂ. ಇದ್ದರೆ ಖಾಸಗಿ ಟ್ರ್ಯಾಕ್ಸಿ, ಜೀಪ್ ಮಾಲೀಕರು 200 ರೂ.ವಸೂಲಿ ಮಾಡುತ್ತಿದ್ದಾರೆ.
08:22 April 07
ಬನಶಂಕರಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ:
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿದೆ. ಪ್ರಯಾಣಿಕರು ಇಲ್ಲದೇ, ಇತ್ತ ಬಸ್‌ಗಳು ಇಲ್ಲದೇ ನಿಲ್ದಾಣ ಬಿಕೋ ಎನ್ನುತ್ತಿದೆ. ನಗರ ಸಾರಿಗೆ ಬಸ್ ಸಂಚಾರವಿಲ್ಲದ ಕಾರಣ ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣದ ಮುಂಭಾಗ ಖಾಸಗಿ ಬಸ್‌ಗಳು ಜಮಾವಣೆಗೊಂಡಿದೆ. ಕನಕಪುರ, ಕೊಳ್ಳೆಗಾಲ, ಚಾಮರಾಜನಗರ ಮಾರ್ಗಗಳಿಗೆ ತೆರಳಲು ಖಾಸಗಿ ಬಸ್‌ಗಳು ರೆಡಿಯಾಗಿವೆ. ಸುಮಾರು ಹತ್ತಕ್ಕೂ ಹೆಚ್ಚು ಖಾಸಗಿ ಬಸ್‌ಗಳು ರೆಡಿಯಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಉದ್ದೇಶದಿಂದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸುಮಾರು 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬನಶಂಕರಿ ಬಸ್ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದಾರೆ.
08:22 April 07
ಆನೇಕಲ್ನಲ್ಲಿ ಪ್ರಯಾಣಿಕರ ಪರದಾಟ:
ಆನೇಕಲ್: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಆನೇಕಲ್ನಲ್ಲಿ ಮಹಾನಗರ ಸಾರಿಗೆ, ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಬೆಳಗ್ಗೆಯೇ ಬಸ್ ಮುಷ್ಕರದ ಬಿಸಿ ಮುಟ್ಟಿದ್ದು, ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು, ಹೊಸೂರು ಸೇರಿದಂತೆ ಬೇರೆ ಕಡೆ ಹೊರಡಲು ಬಂದಿರುವ ಪ್ರಯಾಣಿಕರು ಮುಷ್ಕರದಿಂದ ಊರಿಗೂ ಹೋಗದೆ ನಿಲ್ದಾಣದಲ್ಲೇ ಕಾದು ಕುಳಿತ ದೃಶ್ಯ ಕಂಡುಬಂದಿತು.
08:22 April 07
ಚಿಕ್ಕಮಗಳೂರು: ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರಕ್ಕೆ ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ ದೊರಕುತ್ತಿದೆ. ಬಸ್ ಸಂಚಾರವಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಖಾಸಗಿ ಬಸ್‌ಗಳ ಕಾರುಬಾರು ಜೋರಾಗಿದೆ.
07:38 April 07
ಗಣಿನಗರಿಯಲ್ಲಿ ಹೇಗಿದೆ ಬಂದ್ ಬಿಸಿ:
ಬಳ್ಳಾರಿ: ಗಣಿನಗರಿ ಬಳ್ಳಾರಿಯ ಹೊಸ ಹಾಗೂ ಹಳೇ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದೆ. ಬಸ್ ಸಂಚಾರವಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಸಾರಿಗೆ ನೌಕರರ ಮುಷ್ಕರವನ್ನು ಅರಿತ ಪ್ರಯಾಣಿಕರು ಖಾಸಗಿ ಬಸ್ಗಳತ್ತ ಮುಖ ಮಾಡಿದ್ದಾರೆ.
07:28 April 07
ಚಿತ್ರದುರ್ಗದಲ್ಲಿ ಮುಷ್ಕರಕ್ಕೆ ಬೆಂಬಲ:
ಚಿತ್ರದುರ್ಗ: ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿ ಸಹ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಪಾವಗಡ ಡಿಪೋಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. 260 ಮಾರ್ಗಗಳಲ್ಲಿ ಸಂಚರಿಸಬೇಕಿದ್ದ 294 ಬಸ್‌ಗಳು ಇನ್ನೂ ನಿಲ್ದಾಣಕ್ಕೆ ಬಂದಿಲ್ಲ. ಪರಿಣಾಮ ಪ್ರಯಾಣಿಕರು ಬಸ್ಗಳಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದ್ದು, ಖಾಸಗಿ ಬಸ್‌ಗಳ ಸಂಚಾರ ಬಲು ಜೋರಾಗಿದೆ.
06:58 April 07
ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದ ಖಾಸಗಿ ಬಸ್ಸುಗಳು:
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸರ್ಕಾರ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್, ಟಿ.ಟಿ, ಶಾಲಾ ವಾಹನಗಳ ಮೊರೆ ಹೋಗಿದೆ. ರಾಜಧಾನಿ ಬೆಂಗಳೂರು ನಗರದ ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ರಸ್ತೆಗಿಳಿಯದ ಕಾರಣ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಬಸ್ಗಳಿಲ್ಲದೆ ಖಾಲಿ ಹೊಡೆಯುತ್ತಿದ್ದ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಇದೀಗ ಖಾಸಗಿ ಬಸ್ಸುಗಳು ಎಂಟ್ರಿ ಕೊಟ್ಟಿವೆ.
ಇನ್ನೊಂಡೆದೆ ಖಾಸಗಿ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಿದ್ರೆ ಅವರನ್ನು ಬಂಧಿಸುವ ಎಚ್ಚರಿಕೆ ನೀಡಿರುವ ಸರ್ಕಾರ, ಕೋವಿಡ್ ಹಿನ್ನೆಲೆ ಗುಂಪು ಸೇರುವುದು, ಪ್ರತಿಭಟನೆ, ಮೆರವಣಿಗೆಗೆ ಅವಕಾಶ ನೀಡಿಲ್ಲ.
06:35 April 07
ಬೆಂಗಳೂರಿನಲ್ಲಿ ಬಂದ್ ಬಿಸಿ:
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬೆಂಗಳೂರಿನಲ್ಲಿ ಬಸ್‌ಗಳ ಕೊರತೆ ಆರಂಭವಾಗಿದೆ. ಮೆಜೆಸ್ಟಿಕ್‌ನಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಪ್ರಯಾಣಿಕರು ಬಸ್ ಸಿಗದೆ ಪರದಾಡುತ್ತಿದ್ದಾರೆ.
06:14 April 07
ಸಾರಿಗೆ ಮುಷ್ಕರ:
6ನೇ ವೇತನ ಆಯೋಗ ಜಾರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ 20 ಸಾವಿರಕ್ಕೂ ಅಧಿಕ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ. ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಲಿದೆ. ಈ ಹಿನ್ನೆಲೆ ಯಾವ ಯಾವ ಜಿಲ್ಲೆಗಳಲ್ಲಿ ಬಸ್ ಸಂಚಾರ ವ್ಯವಸ್ಥೆ ಹೇಗಿರಲಿದೆ ಎಂದು ಇಲ್ಲಿದೆ ನೋಡಿ,,