ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಾರಣ ನಗರದ ಬಸ್ ನಿಲ್ದಾಣವನ್ನೇ ಬಿಎಂಟಿಸಿ ಸಂಸ್ಥೆ ಅಡವಿಟ್ಟಿದೆ.
ಕೋವಿಡ್ ಬರುವ ಮುನ್ನವೂ, ಸಾರಿಗೆ ನಿಗಮ ಸಂಕಷ್ಟದಲ್ಲಿ ಮುಳುಗಿತ್ತು. ಆದರೆ ಕೊರೊನಾ ನಂತರ ಸಾರಿಗೆ ನಿಗಮ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ಇದಕ್ಕೆ ಬ್ರೇಕ್ ಹಾಕಲು ಅಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನೌಕರರಿಗೆ ಸಂಬಳ, ಡೀಸೆಲ್ ಖರೀದಿ ಸೇರಿದಂತೆ ಸಣ್ಣ-ಪುಟ್ಟ ಅಗತ್ಯ ವಸ್ತುಗಳ ಖರೀದಿಗೂ ದುಡ್ಡಿಲ್ಲದೇ ಪರದಾಟ ನಡೆಸುತ್ತಿದೆ.
ಆರ್ಥಿಕ ನಿರ್ವಹಣೆಗೆ ಸಾಲದ ಮೇಲೆ ಸಾಲ ಮಾಡುತ್ತಿರುವ ಬಿಎಂಟಿಸಿ, 2019ರ ಅಕ್ಟೋಬರ್ 10 ರಿಂದ 2021ರ ಜನವರಿ 12ರ ಅವಧಿಯಲ್ಲಿ 160 ಕೋಟಿ ರೂಪಾಯಿ ಸಾಲವನ್ನು ಕೆನರಾ ಬ್ಯಾಂಕ್ನಿಂದ ಪಡೆದಿದೆ. ಇದಕ್ಕೆ ಸರಾಸರಿ 1.04 ಕೋಟಿ ರೂ.ಗಳ ಬಡ್ಡಿಯನ್ನು ಪಾವತಿಸುತ್ತಿದೆ. ಈ ಸಾಲಕ್ಕೆ ಶಾಂತಿನಗರದ ಟಿಟಿಎಂಸಿ ಅನ್ನೇ ಅಡಮಾನ ಇರಿಸಲಾಗಿದೆ. ಈ ಕುರಿತು ಆರ್ಟಿಐ ಅರ್ಜಿಯೊಂದಕ್ಕೆ ಬಿಎಂಟಿಸಿ ಅಧಿಕೃತ ಮಾಹಿತಿ ನೀಡಿದೆ.
ಇತ್ತ ಸಿಬ್ಬಂದಿಗೆ ಡಿಸೆಂಬರ್, ಜನವರಿ ತಿಂಗಳ ಅರ್ಧ ಸಂಬಳವನ್ನು ನೀಡಿದ್ದು, ಆರ್ಥಿಕ ಹೊರೆಗೆ ಸಿಲುಕಿರುವ ನಿಗಮ ಮುಂದೆ ಯಾವ ರೀತಿ ಇದರಿಂದ ಹೊರಬರಲಿದೆ ಎಂಬುದನ್ನು ಕಾದುನೋಡಬೇಕು.
ನಾಳೆ ಪ್ರತಿಭಟನೆ!
ಬಿಎಂಟಿಸಿ ಕೇಂದ್ರ ಕಚೇರಿ ಎದುರು ನಾಳೆ ಸಾರಿಗೆ ನೌಕರರಿಂದ ಪ್ರತಿಭಟನೆ ನಡೆಸಲಾಗುತ್ತದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಕೆಎಸ್ಆರ್ಟಿಸಿ ನಿಗಮಗಳ ಜಂಟಿ ಕಾರ್ಮಿಕರ ವೇದಿಕೆಯಿಂದ, ಸಾರಿಗೆ ಮುಷ್ಕರದ ವೇಳೆ ನೀಡಿದ್ದ ಭರವಸೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.