ಬೆಂಗಳೂರು: ಚುನಾವಣೆಗೂ ಮುನ್ನ ನೀಡಿದ ಐದು ಗ್ಯಾರಂಟಿಗಳ ಜಾರಿಗೆ ಸಿದ್ಧತೆ ನಡೆಸಿರುವ ಸರ್ಕಾರ ಇಂದು ಸಾರಿಗೆ ಇಲಾಖೆ ಜೊತೆ ಮಹತ್ವದ ಸಭೆ ಹಮ್ಮಿಕೊಂಡಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ವಿಭಾಗಗಳ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವರು. ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ ವಿಭಾಗಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಚಿವರು ಚರ್ಚಿಸಲಿದ್ದು, ಈ ನಿಗಮಗಳಲ್ಲಿ ಒಟ್ಟು ಎಷ್ಟು ಬಸ್ಗಳಿವೆ, ಅವುಗಳ ಸ್ಥಿತಿ ಹೇಗಿದೆ, ನಷ್ಟದಲ್ಲಿರುವ ಪ್ರಮಾಣ ಎಷ್ಟು ಹಾಗೂ ಈ ನಾಲ್ಕು ನಿಗಮಗಳ ಬಸ್ಸುಗಳಲ್ಲಿ ಸಂಚರಿಸುವ ಒಟ್ಟು ಮಹಿಳೆಯರ ಸಂಖ್ಯೆ ಎಷ್ಟು ಎಂಬ ಮಾಹಿತಿ ಪಡೆಯಲಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ವಿಭಾಗಗಳ ಒಟ್ಟು ಪರಿಸ್ಥಿತಿ ಅವಲೋಕಿಸಿ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿರುವ ರೆಡ್ಡಿ ಇದರ ಜೊತೆಗೆ ಉಚಿತ ಬಸ್ಸು ಪ್ರಯಾಣ ವ್ಯವಸ್ಥೆ ನೀಡುವುದರಿಂದ ಸಾರಿಗೆ ಸಂಸ್ಥೆಗೆ ಆಗುವ ಆರ್ಥಿಕ ಹೊರೆಯ ಮಾಹಿತಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಾಂತಿನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿದೆ.
ಬಸ್ನಲ್ಲಿ ಸಂಚರಿಸುವ ಒಟ್ಟು ಮಹಿಳೆಯರ ಸಂಖ್ಯೆ ಎಷ್ಟು? ಪುರುಷರ ಸಂಖ್ಯೆ ಎಷ್ಟು? ಉಚಿತ ಸಂಚಾರ ನೀಡುವ ಭರವಸೆಯನ್ನು ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದು ಇದರ ಜಾರಿಯಿಂದ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗೆ ಯಾವ ರೀತಿಯ ಹೊರೆ ಆಗಲಿದೆ. ಬಂಡವಾಳ ಕ್ರೋಢೀಕರಣಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು. ಈಗಾಗಲೇ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಅಲ್ಲೆಲ್ಲ ಈ ರೀತಿಯ ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಅಲ್ಲಿನ ಪರಿಸ್ಥಿತಿ ಹೇಗಿದೆ?. ಅಕ್ಕ ಪಕ್ಕದ ರಾಜ್ಯಗಳಲ್ಲಿ ಹಾಗೂ ದೇಶದ ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳ ಸ್ಥಿತಿಗತಿ ಹೇಗಿದೆ? ನಮ್ಮ ಪರಿಸ್ಥಿತಿ ಹೇಗಿದ್ದು ಈ ಉಚಿತ ಸಂಚಾರ ಮಹಿಳೆಯರಿಗೆ ಕಲ್ಪಿಸುವುದರಿಂದ ಯಾವ ಸ್ಥಿತಿಗೆ ತಲುಪುತ್ತೇವೆ.