ಬೆಂಗಳೂರು:ಕೋವಿಡ್ನಿಂದಾಗಿ ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಲಾಭದಾಯಕವಾಗಿ ಮಾಡುವುದೇ ನನ್ನ ಗುರಿ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಟಿಸಿ, ಕೆಎಸ್ಆರ್‌ಟಿಸಿ, ನಾಲ್ಕು ನಿಗಮದ ಜೊತೆ ಸುದೀರ್ಘ ಚರ್ಚೆ ಮಾಡಲಾಗಿದೆ.
ಇದರ ಜೊತೆಗೆ ದೇವರಾಜ್ ಅರಸ್ ಟರ್ಮಿನಲ್ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತಿಯೊಂದು ಇಲಾಖೆಯೂ ಪ್ರಗತಿಯಾಗಬೇಕು. ಪ್ರತಿಯೊಂದನ್ನೂ ಚರ್ಚೆ ಮಾಡಬೇಕು. ಕೋವಿಡ್ ಅಲೆಯ ಬಳಿಕ ಪರಿಸ್ಥಿತಿ ಬಗ್ಗೆ ಕೂಡ ಚರ್ಚೆಯಾಗಿದೆ. ನಷ್ಟದಲ್ಲಿರುವ ಸಂಸ್ಥೆಯನ್ನು, ಲಾಭದಾಯಕವಾಗಿ ತರಬೇಕು. ಅದಕ್ಕಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದ್ದೇವೆ:
- ಕೆಎಸ್ಆರ್‌ಟಿಸಿ - 427 ಕೋಟಿ ರೂ.
- ಬಿಎಂಟಿಸಿ- 548 ಕೋಟಿ ರೂ.
- ಹೊಸ ಕೆಎಸ್ಆರ್‌ಟಿಸಿ -389 ಕೋಟಿ ರೂ.
- ಕಲ್ಯಾಣ ಕರ್ನಾಟಕ - 191 ಕೋಟಿ ರೂ.
ಒಟ್ಟು 1,121 ಕೋಟಿ ರೂ. ನಷ್ಟವಾಗಿದೆ ಎಂದು ಮಾಹಿತಿ ನೀಡಿದರು. ಸೇವೆಯ ಜೊತೆಯಲ್ಲಿ ಲಾಭದಾಯಕವಾಗಿ ಮಾಡಬೇಕು. ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚೆ ಮಾಡಿದ್ದೇನೆ. ಇಷ್ಟು ದೊಡ್ಡ ನಷ್ಟಕ್ಕೆ ಕಾರಣ ಡೀಸಲ್ ದರ ಹೆಚ್ಚಳ. ಅದರ ಜೊತೆಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ನಷ್ಟವಾಗಿದೆ ಎಂದರು.
ಟಾಸ್ಕ್ ಫೋರ್ಸ್ ರಚನೆ: ಸಾರಿಗೆ ಇಲಾಖೆ ನಷ್ಟ ಮತ್ತಿತರ ಸಮಸ್ಯೆಗಳ ಪರಿಶೀಲನೆ ಹಾಗೂ ಪರಿಹಾರಕ್ಕೆ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲು ಉದ್ದೇಶಿಸಲಾಗಿದೆ. ಜನರಿಗೆ ಅನುಕೂಲ ಆಗುವ ರೀತಿ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ. ಲಾಭದಾಯಕವಾಗಿ ಮಾಡಲು ಕ್ರಮ ವಹಿಸಲಾಗುವುದು. ನಾನ್ ಫೇರ್ ಬಾಕ್ಸ್ ಕೂಡ ಆಗಬೇಕಿದೆ.
ಜನರಿಗೂ ಆತಂಕ ಹೋಗುವಂತ ಕೆಲಸ ಆಗಬೇಕಿದೆ. ಟೆಕ್ನಾಲಜಿ ಬಳಸಿ ಕ್ಯಾಶ್ಲೆಸ್ ಟಿಕೆಟ್ ದೊರೆಯುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಸ್ ಖರೀದಿ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಟಾಸ್ಕ್ ಫೋರ್ಸ್ ರಚನೆ ಮಾಡುತ್ತಿರುವುದೇ ಇಂತಹ ವಿಚಾರಗಳಿಗೆ. ನಷ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ ಎಂದರು. ಲಾಂಗ್ ಡ್ರೈವ್ ರೂಟ್‌ಗಳಲ್ಲಿ ಡೀಸಲ್ ನಷ್ಟ ಆಗುತ್ತಿದೆ. ನಷ್ಟ ಕಡಿಮೆ ಮಾಡಲು ಒಂದಷ್ಟು ಯೋಜನೆ ಮಾಡಲಾಗಿದೆ. ಇಲಾಖೆಯನ್ನು ಲಾಭದಾಯಕವಾಗಿ ಮಾಡುತ್ತೇವೆ ಎಂದರು.