ಬೆಂಗಳೂರು:ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಮಾರ್ಚ್.28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಚಿವ ಶ್ರೀರಾಮುಲು ಅವರ ಬಳ್ಳಾರಿ ನಿವಾಸದ ಬಳಿ ಮಾರ್ಚ್.28ರಿಂದ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. 2021ರ ಏಪ್ರಿಲ್ 7ರಂದು ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ ನಾಲ್ಕೂ ನಿಗಮಗಳಲ್ಲಿ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಹಾಗೂ ಅಮಾನತು ಮಾಡಿ ನೂರಾರು ನೌಕರರ ವಿರುದ್ಧ ಸುಳ್ಳು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಮೊದಲು ಈ ನಿಟ್ಟಿನಲ್ಲಿ ಎಲ್ಲವನ್ನು ಸರಿಪಡಿಸಬೇಕು. 2021ರ ಏಪ್ರಿಲ್ .6 ರಂದು ಇದ್ದ ಸ್ಥಿತಿಯಲ್ಲಿ ನೌಕರರಿಗೆ ಸೇವೆ ನೀಡಬೇಕು. ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದರು.
ಕಳೆದ 11 ತಿಂಗಳಿನಿಂದ ಕೂಟದ ಪದಾಧಿಕಾರಿಗಳು ಹಲವು ಬಾರಿ ಸಿಎಂ, ಸಾರಿಗೆ ಸಚಿವರಿಗೆ, ಹಲವು ಶಾಸಕರಿಗೆ ಹಾಗೂ ಆಡಳಿತ ಮಂಡಳಿಗೆ ನೌಕರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡರೂ ಪೂರ್ಣವಾಗಿ ಸಮಸ್ಯೆ ಪರಿಹರಿಸಲಿಲ್ಲ. ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಉಪವಾಸ ಸತ್ಯಾಗ್ರಹವೊಂದೇ ಮಾರ್ಗವೆಂದು ತೀರ್ಮಾನಿಸಿದ್ದೇವೆ. ಸತ್ಯಾಗ್ರಹದ ವೇಳೆ ಅಸುನೀಗಿದರೂ ಸರಿಯೇ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರ ಮತ್ತು ನಿಗಮಗಳು ಕಲ್ಪಿಸಿ ಕೊಡುವವರೆಗೂ ಹೋರಾಟ ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದರು.
ಪ್ರಮುಖ ಬೇಡಿಕೆಗಳು:ಮುಷ್ಕರದ ಸಮಯದಲ್ಲಿ ಮಾಡಿರುವ ಎಲ್ಲ ವಜಾ ಪ್ರಕರಣಗಳನ್ನು ಯಾವುದೇ ಶಿಕ್ಷೆ, ದಂಡ ಮತ್ತು ನಿಬಂಧನೆ ವಿಧಿಸದೆ ಪುನರ್ ನೇಮಕ ಮಾಡಿಕೊಳ್ಳಬೇಕು. ಈಗಾಗಲೇ ತರಬೇತಿ ನೌಕರರನ್ನು ಹೊಸ ತರಬೇತಿ ನೌಕರರೆಂದು ಹಾಗೂ ಪರೀಕ್ಷಾರ್ಥ ನೌಕರರನ್ನು ಹೊಸ ಪರೀಕ್ಷಾರ್ಥಿ ಎಂಬ ಜಂಟಿ ಮೆಮೊಗಳಿಗೆ ಸಹಿ ಮಾಡಿಸಿಕೊಂಡಿಸಿಕೊಂಡಿರುವ ನಿಂಬಧನೆಗಳನ್ನು ರದ್ದು ಮಾಡಬೇಕು. ಕಾಯಂ ನೌಕರರನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೇ ಪುನರ್ ನೇಮಕ ಮಾಡಿಕೊಳ್ಳಬೇಕು ಎಂದರು.