ಬೆಂಗಳೂರು: ಮತ್ತೊಮ್ಮೆ ಮುಷ್ಕರಕ್ಕೆ ಸಾರಿಗೆ ನೌಕರರ ಕೂಟ ಸಜ್ಜಾಗಿದೆ. ರಾಜ್ಯ ಸಂಪೂರ್ಣ ಅನ್‌ಲಾಕ್ ಆದ ಬೆನ್ನಲ್ಲೇ ಮುಷ್ಕರ ನಡೆಸಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ.
ಕಳೆದ ಮುಷ್ಕರಕ್ಕಿಂತ ಈ ಬಾರಿಯ ಪ್ರತಿಭಟನೆ ತೀವ್ರವಾಗಲಿದೆ. ಈ ಬಾರಿ ಸಾರಿಗೆ ನೌಕರರ ಕುಟುಂಬಸ್ಥರು ಕೂಡ ಪ್ರತಿಭಟನೆಗೆ ಇಳಿಯಲಿದ್ದಾರೆ. ಸಾರಿಗೆ ನೌಕರರು ಹೆಂಡತಿ ಮಕ್ಕಳೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ನಾಲ್ಕು ನಿಗಮಗಳಿಂದ 1.30 ಲಕ್ಷ ಸಾರಿಗೆ ನೌಕರರಿದ್ದಾರೆ. ನೌಕರರ ಕುಟುಂಬಸ್ಥರು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದು, ಕಳೆದ ಡಿಸೆಂಬರ್ನಲ್ಲಿ 15 ದಿನ ಬಸ್ ಬಂದ್ ಮಾಡಿ ಮುಷ್ಕರ ಮಾಡಿದ್ದೆವು. ಆ ವೇಳೆ ಸರ್ಕಾರ ಲಿಖಿತ ರೂಪದಲ್ಲಿ ಕೊಟ್ಟಿದ್ದ ಮಾತು ಮುರಿದಿದೆ.