ಬೆಂಗಳೂರು: ಮಹಾಮಾರಿ ಕೋವಿಡ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಸಂಕಷ್ಟದ ಜೊತೆಗೆ ಒಂದಿಷ್ಟು ಪಾಠವನ್ನೂ ಕಲಿಸಿದೆ, ಹೌದು ಈ ಸೋಂಕು ಹರಡುವ ಪರಿಣಾಮ ಸ್ವಚ್ಛತೆಗೆ ಭಾರಿ ಮಹತ್ವ ಕೊಡಲು ಆರಂಭಿಸಿದೆವು. ಆದರೂ ಬುದ್ಧಿ ಕಲಿಯದ ಕೆಲವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆ ಬಸ್ ನಿಲ್ದಾಣ, ಕಚೇರಿ, ಘಟಕ ಹಾಗೂ ವಿಭಾಗೀಯ ಕಾರ್ಯಾಗಾರ, ತರಬೇತಿ ಕೇಂದ್ರ ಸೇರಿದಂತೆ ಉಪಹಾರ ಗೃಹಗಳ ಆವರಣಗಳಲ್ಲಿ ಉಗುಳುವಂತಹ ವ್ಯಕ್ತಿಗಳಿಗೆ ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ಬೆಂಗಳೂರು, ದಾವಣಗೆರೆ, ರಾಮನಗರ, ತುಮಕೂರು ಸೇರಿದಂತೆ ಮಂಡ್ಯ, ಹಾಸನ, ಮಂಗಳೂರು ಭಾಗಗಳಲ್ಲಿ ಎಲ್ಲೆಂದರಲ್ಲಿ ಉಗುಳಿದ ವ್ಯಕ್ತಿಗಳಿಗೆ ದಂಡ ವಿಧಿಸಲಾಗಿದೆ.
ಬಸ್ ನಿಲ್ದಾಣಗಳ ಪರಿಸ್ಥಿತಿ:
ನಿತ್ಯ ಚಟುವಟಿಕೆಗಳಿಂದ ಇರುತ್ತಿದ್ದ ಸ್ಥಳಗಳೆಂದರೆ ಬಸ್ ನಿಲ್ದಾಣಗಳು. ನಿತ್ಯ ಲಕ್ಷಾಂತರ ಪ್ರಯಾಣಿಕರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಯಾಣ ಬೆಳೆಸುತ್ತಾರೆ. ಆದರೆ ಮಹಾಮಾರಿ ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟ ಸಮಯದಿಂದ ವಾತಾವರಣವೇ ಬದಲಾಗಿ ಹೋಯ್ತು. ಈಸಾಂಕ್ರಾಮಿಕ ರೋಗ ಹಿನ್ನೆಲೆ, ಸಾಕಷ್ಟು ಮುಂಜಾಗ್ರತಾ ಕ್ರಮಕ್ಕೆ ನಿಗಮಗಳು ಮುಂದಾದವು.
ಕೋವಿಡ್ ಸಮಸ್ಯೆ:
ಮೊದ ಮೊದಲು ಕೊರೊನಾ ಕಾರಣಕ್ಕೆ ಸಾಮಾಜಿಕ ಅಂತರ, ಬಸ್ನಲ್ಲಿ ಇಂತಿಷ್ಟು ಪ್ರಯಾಣಿಕರು ಪ್ರಯಾಣಿಸಬೇಕು ಎಂದು ಆದೇಶಿಸಿದರು. ಬಳಿಕ ನಷ್ಟದ ಸುಳಿಗೆ ಸಿಲುಕಿದ ಸಾರಿಗೆ ಸಂಸ್ಥೆಗಳು ಸಂಪೂರ್ಣ ಸೀಟು ಭರ್ತಿ ಮಾಡಲು ಮುಂದಾದವು. ಇದೀಗ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದರೂ ಸಮಸ್ಯೆ ಸಂಪೂರ್ಣವಾಗಿ ದೂರಗೊಂಡಿಲ್ಲ.
ಸದ್ಯದ ಪರಿಸ್ಥಿತಿ:
ಈ ನಿಟ್ಟಿನಲ್ಲಿ ಸದ್ಯ ನಿಲ್ದಾಣಗಳಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನೋಡಿದರೆ, ಬಸ್ ನಿಲ್ದಾಣಗಳಲ್ಲಿ, ಬಸ್ಸಿನೊಳಗೆ ಪ್ರಯಾಣಿಕರು ಫೇಸ್ ಮಾಸ್ಕ್ ಅನ್ನು ತಪ್ಪದೇ ಹಾಕುತ್ತಿದ್ದರೂ ಸಾಮಾಜಿಕ ಅಂತರ ಪಾಲನೆ ಶೂನ್ಯ ಪ್ರಮಾಣದಲ್ಲಿದೆ. ಕಾರಣ ಸಾವಿರಾರು ಜನರು ಟರ್ಮಿನಲ್ಗೆ ಆಗಮಿಸುವುದರಿಂದ ಸಾಮಾಜಿಕ ಅಂತರ ಪಾಲನೆ ಕಷ್ಟವಾಗಿದೆ. ಇನ್ನು ಬಸ್ಸುಗಳು ಡಿಪೋದಿಂದ ಹೊರಡುವಾಗ ಸ್ಯಾನಿಟೈಸ್ ಆಗಿ ಹೊರ ಬರುತ್ತಿದೆ. ಆದರೆ ಪ್ರಯಾಣಿಕರಿಗಾಗಿ ಬಸ್ಸಿನೊಳಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಿಲ್ಲ, ಥರ್ಮಲ್ ಸ್ಕ್ರೀನಿಂಗ್ಗೂ ಬ್ರೇಕ್ ಹಾಕಲಾಗಿದೆ.