ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಇದೀಗ ಪರಿಸರ ದಿನದ ಅಂಗವಾಗಿ ಪರಿಸರ ಹಾಳಾಗದಂತೆ ಸಂರಕ್ಷಣೆ ಮಾಡುವಂತ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲ ವಿಮಾನ ನಿಲ್ದಾಣಗಳಿಗೂ ಮಾದರಿಯಾಗಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿದ್ಯುತ್ ಉಳಿತಾಯ, ಸೋಲಾರ್ ಸಿಸ್ಟಮ್ ಅಳವಡಿಸಿಕೊಳ್ಳುವುದು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ವ್ಯವಸ್ಥೆಯನ್ನು ವಿಮಾನ ನಿಲ್ದಾಣ ಅಳವಡಿಸಿಕೊಂಡು ಬಂದಿದೆ. ಇದರಿಂದ ಹಲವು ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡಿದೆ. ಇದೀಗ ಪರಿಸರ ಉಳಿವಿಗಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಇದರಲ್ಲೂ ಸಕ್ಸಸ್ ಕಾಣುತ್ತಿದೆ.
ರಸ್ತೆ ಅಗಲೀಕರಣ ಹಾಗೂ ಮೆಟ್ರೋ ಕಾಮಗಾರಿಗೆ ಸ್ಥಳ ನೀಡುವ ಅನಿವಾರ್ಯತೆ ವಿಮಾನ ನಿಲ್ದಾಣಕ್ಕಿದೆ. ರಸ್ತೆ ಅಗಲೀಕರಣ ಮತ್ತು ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ದೊಡ್ಡ ದೊಡ್ಡ ಮರಗಳಿದ್ದು ಅವುಗಳು ನಾಶವಾಗದಂತೆ ಬೇರು ಸಮೇತ ಸ್ಥಳಾಂತರಿಸುವ ಹೊಸ ವಿಧಾನಕ್ಕೆ ಕೈ ಹಾಕಿದೆ. ಇದಕ್ಕಾಗಿ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ವೋಲ್ವೋಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರ ಮೂಲಕ ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿ ಅಲ್ಲಿ ನೆಡಬಹುದಾಗಿದೆ.
ದೊಡ್ಡ ಮರಗಳನ್ನು ಬೇರು ಸಮೇತ ಸ್ಥಳಾಂತರಿಸುವ ನವೀನ ವಿಧಾನಕ್ಕೆ ಮೊರೆ ಈ ವೈಜ್ಞಾನಿಕ ಪರಿಹಾರದಿಂದ ಮರಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಈಗಾಗಲೇ 247 ಮರಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು, ಯಾವುದೇ ಹಾನಿಯಾಗಿಲ್ಲ. ಎಂದಿನಂತೆ ಅಲ್ಲೂ ಉತ್ತಮ ರೀತಿಯಲ್ಲಿ ಬೆಳೆಯುತ್ತಿವೆ. ಕಳೆದೆರಡು ತಿಂಗಳಿಂದ ಈ ಕೆಲಸ ಮಾಡುತ್ತಿದ್ದು, ಇನ್ನು ಒಂದು ತಿಂಗಳ ಕಾಲಾವಕಾಶವಿದೆ. ಇವಾಗ ಒಂದು ವೋಲ್ವೋ ಟ್ರೀ- ಟ್ರಾನ್ಸ್ಪ್ಲಾಂಟರ್ನೊಂದಿಗೆ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಇನ್ನೊಂದು ಟ್ರೀ ಟ್ರಾನ್ಸ್ಪ್ಲಾಂಟರ್ ಬರಲಿದೆ. ಆಗ ಇನ್ನು ವೇಗವಾಗಿ ಮರಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಇಂದು ಮರವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲು ಒಂದೂವರೆ ಗಂಟೆ ಬೇಕಾಗಲಿದೆ. ಅದು ಎಷ್ಟು ದೂರದಿಂದ ಎಷ್ಟು ದೂರಕ್ಕೆ ಅನ್ನೋದರ ಮೇಲೆ ಟೈಮ್ ತೆಗೆದುಕೊಳ್ಳಲಿದೆ. ಅಲ್ಲದೇ ಮರಗಳ ಕಾಂಡ ಕಡಿಮೆ ಅಂದರೆ 6 ಇಂಚಿನ ಮರಗಳನ್ನು ಸ್ಥಳಾಂತರಿಸಬಹುದು. ಅದಕ್ಕಿಂತ ದೊಡ್ಡ ಮರಗಳನ್ನು ಸ್ಥಳಾಂತರಿಸಲು ಸ್ವಲ್ಪ ಕಷ್ಟವಾಗುತ್ತದೆ ಎನ್ನುತ್ತಾರೆ (ಬಿಐಎಎಲ್) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ ಪ್ರಸನ್ನ ಮೂರ್ತಿ.
ಈ ವೈಜ್ಞಾನಿಕ ತಂತ್ರಜ್ಞಾನದಿಂದ ಕಡಿಮೆ ಖರ್ಚಿನಿಂದ ಹೆಚ್ಚು ಕೆಲಸ ಮಾಡಬಹುದಾಗಿ. ಒಂದು ದಿನಕ್ಕೆ 14 ರಿಂದ 16 ಮರಗಳನ್ನು ರೀ ಟ್ರಾನ್ಸ್ಪ್ಲಾಂಟರ್ ಮಾಡಬಹುದು. ಇದರಿಂದ ಮರಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ವಿಮಾನ ನಿಲ್ದಾಣದಲ್ಲಿ ಈಗಾಗಲೆ ನೂರಾರು ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎನ್ನುತ್ತಾರೆ ಬಿಐಎಎಲ್ನ ಸಿಬ್ಬಂದಿ ಮಂಜುನಾಥ್.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿ ಸಲ ಒಂದಲ್ಲ ಒಂದು ವಿನೂತನ ಪ್ರಯತ್ನಗಳಿಂದ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದೀಗ ಹೊಸದಾಗಿ ಪರಿಸರ ಉಳಿವಿಗಾಗಿ ಮಾಡುತ್ತಿರುವ ಪ್ರಯತ್ನಕ್ಕೂ ಯಶಸ್ಸು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ಯಾವ ಹೊಸ ಪ್ರಯೋಗ ಮಾಡಲಿದೆ ಅನ್ನೋದನ್ನು ನೋಡಬೇಕು.