ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ನಾಳೆಯಿಂದ ಮೇ 20ರ ವರೆಗೆ ಟ್ರಾನ್ಸ್​ಫಾರ್ಮರ್ ನಿರ್ವಹಣಾ ಅಭಿಯಾನ

ಟ್ರಾನ್ಸ್​ಫಾರ್ಮರ್​​ಗಳ ರಿಪೇರಿಗೆ ಇಂಧನ ಇಲಾಖೆ ಪ್ರತಿವರ್ಷ 150 ಕೋಟಿ ರೂ. ವೆಚ್ಚ ಮಾಡುತ್ತದೆ. ನಿರ್ವಹಣಾ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ರಿಪೇರಿ ವೆಚ್ಚ ತಗ್ಗಿಸಲು ಸಾಧ್ಯವಿದೆ. ಜೊತೆಗೆ ಎಲ್ಲಿ ಹೊಸ ಟ್ರಾನ್ಸ್​ಫಾರ್ಮರ್​​ಗಳ ತುರ್ತು ಅಗತ್ಯವಿದೆ ಎಂಬುದನ್ನೂ ಈ ಅಭಿಯಾನದ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 15 ದಿನಗಳ‌ ಕಾಲ ಅಭಿಯಾನ ನಡೆಯಲಿದೆ.

By

Published : May 4, 2022, 7:28 PM IST

transformer-management-campaign-in-karnataka
ರಾಜ್ಯಾದ್ಯಂತ ಮೇ 5ರಿಂದ 20ರವರೆಗೆ ಟ್ರಾನ್ಸ್​ಫಾರ್ಮರ್ ನಿರ್ವಹಣಾ ಅಭಿಯಾನ

ಬೆಂಗಳೂರು : ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾನ್ಸ್​ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸಲು ರಾಜ್ಯಾದ್ಯಂತ ನಾಳೆಯಿಂದ ಮೇ 20ರ ವರೆಗೆ ಟ್ರಾನ್ಸ್​ಫಾರ್ಮರ್ ನಿರ್ವಹಣಾ ಅಭಿಯಾನ ನಡೆಸಲು ಇಂಧನ ಇಲಾಖೆ ನಿರ್ಧರಿಸಿದೆ. ಕಳೆದ ಒಂದು ತಿಂಗಳಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲ ಹಂತದ ಅಧಿಕಾರಿಗಳೂ ಅಭಿಯಾನದಲ್ಲಿ ಭಾಗವಹಿಸುವಂತೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೆಯ ವಿದ್ಯುತ್​ ಪರಿವರ್ತಕಗಳು ಸಾಕಷ್ಟು ಪ್ರಮಾಣದಲ್ಲಿವೆ. ಮಳೆಗಾಲದಲ್ಲಿ ಅವುಗಳ ನಿರ್ವಹಣಾ ಸಮಸ್ಯೆ ಉಂಟಾಗುತ್ತಿದೆ. ಸಿಡಿಲು, ಇತ್ಯಾದಿ ಕಾರಣಗಳಿಂದ ಪರಿವರ್ತಕಗಳ ಹಾನಿ ಸಾಧ್ಯತೆ ಇದೆ. ಜೊತೆಗೆ ಅಧಿಕ ಲೋಡ್​​ನಿಂದ ಟ್ರಾನ್ಸ್​ಫಾರ್ಮರ್​ಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಭಿಯಾನ ನಡೆಸಲಾಗುತ್ತಿದೆ.

ಅಭಿಯಾನದಲ್ಲಿ ಎಲ್ಲ ಹಂತದ ಅಧಿಕಾರಿಗಳೂ ಭಾಗಿಯಾಗಬೇಕು. ಪ್ರತಿ ದಿನ ಪರಿಶೀಲನೆ ನಡೆಸಿದ ಟ್ರಾನ್ಸ್​ಫಾರ್ಮರ್​​ಗಳ ವಿವರ, ಅವುಗಳಲ್ಲಿ ಕಂಡುಬಂದ ನ್ಯೂನತೆ, ಯಾವ ಕಾರಣಕ್ಕಾಗಿ ತೊಂದರೆ ಕಾಣಿಸಿಕೊಂಡಿದೆ ಎಂಬ ವಿವರವನ್ನು ಕೇಂದ್ರ ಕಚೇರಿಗೆ ಪ್ರತಿದಿನ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಪ್ರತಿ ವರ್ಷವೂ ಈ ರೀತಿ ಅಭಿಯಾನ ನಡೆಸುವುದರಿಂದ ಟ್ರಾನ್ಸ್​ಫಾರ್ಮರ್​​ಗಳ ಕ್ಷಮತೆ ಹೆಚ್ಚಲಿದೆ.

ಟ್ರಾನ್ಸ್​ಫಾರ್ಮರ್​​ಗಳ ರಿಪೇರಿಗೆ ಇಂಧನ ಇಲಾಖೆ ಪ್ರತಿವರ್ಷ 150 ಕೋಟಿ ರೂ. ವೆಚ್ಚ ಮಾಡುತ್ತದೆ. ನಿರ್ವಹಣಾ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ರಿಪೇರಿ ವೆಚ್ಚ ತಗ್ಗಿಸಲು ಸಾಧ್ಯವಿದೆ. ಜೊತೆಗೆ ಎಲ್ಲಿ ಹೊಸ ಟ್ರಾನ್ಸ್​ಫಾರ್ಮರ್​​ಗಳ ತುರ್ತು ಅಗತ್ಯವಿದೆ ಎಂಬುದನ್ನೂ ಈ ಅಭಿಯಾನದ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 15 ದಿನಗಳ‌ ಕಾಲ ಅಭಿಯಾನ ನಡೆಯಲಿದೆ.

ನಮ್ಮ ಇಲಾಖೆಯ ಸ್ವತ್ತಿನ ಬಗ್ಗೆ ನಾವೇ ಜವಾಬ್ದಾರಿ ಹಾಗೂ ಬದ್ಧತೆ ಹೊಂದಿರಬೇಕು. ಈ ಹಿನ್ನೆಲೆಯಲ್ಲಿ ಅಭಿಯಾನ ಆಯೋಜಿಸಲಾಗಿದೆ. ಇದು 24 ಗಂಟೆಯಲ್ಲಿ ಟ್ರಾನ್ಸ್​ಫಾರ್ಮರ್ ಬದಲಾವಣೆ ಯೋಜನೆಯ ಮುಂದುವರಿದ ಭಾಗ. ಈ ದಿಶೆಯಲ್ಲಿ ನಾವು ಶೇ.80ರಷ್ಟು ಯಶಸ್ಸು ಸಾಧಿಸಿದ್ದೇವೆ. ನಿರ್ವಹಣಾ ಸಮಸ್ಯೆ ಏಕೆ ಉದ್ಭವವಾಗುತ್ತಿದೆ ಎಂಬುದನ್ನು ಅರ್ಥೈಸಿಕೊಂಡರೆ ಪರಿಹಾರ ಕಲ್ಪಿಸುವುದು ಸುಲಭವಾಗುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ನೇಮಕಾತಿಗೆ ಸರ್ಕಾರವೇ ಅಂಗಡಿ ತೆರೆದಿದೆ.. ಅಶ್ವತ್ಥ್ ನಾರಾಯಣ ಅತ್ಯಂತ ಭ್ರಷ್ಟ ಸಚಿವ.. ಡಿಕೆಶಿ

ABOUT THE AUTHOR

...view details