ಬೆಂಗಳೂರು: ನಗರದ ಕೆಲವೆಡೆ ಪಾದಚಾರಿ ಮಾರ್ಗಗಳಲ್ಲೇ ಟ್ರಾನ್ಸ್ ಫಾರ್ಮರ್ಗಳನ್ನು ಅಳವಡಿಸಿರುವ ಬೆಸ್ಕಾಂ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ರಸ್ತೆ ಮಧ್ಯದಲ್ಲೇ ಕಂಬ ನೆಡುತ್ತೀರಾ ಎಂದು ಕೋರ್ಟ್ ಪ್ರಶ್ನಿಸಿದೆ. ಅಲ್ಲದೇ, ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸ್ ಫಾರ್ಮರ್ಗಳನ್ನು ಅಳವಡಿಸಲು ಯಾರಿಂದ ಅನುಮತಿ ಪಡೆದಿದ್ದೀರಾ ಎಂಬುದನ್ನು ಸ್ಪಷ್ಪಡಿಸಿ ಎಂದು ತಾಕೀತು ಮಾಡಿದೆ.
ನಗರದ ಪಾದಚಾರಿ ಮಾರ್ಗಗಳು ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್ಫಾರ್ಮರ್ಗಳು ಅಪಾಯಕಾರಿಯಾಗಿದ್ದು, ಅವುಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ. ಬಿ. ಅತ್ರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬಿಬಿಎಂಪಿ ಪರ ವಕೀಲರು, ನಗರದ ಪಾದಚಾರಿ ಮಾರ್ಗಗಳ ಮೇಲೆ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳಡಿಸಲು ಬೆಸ್ಕಾಂಗೆ ಅನುಮತಿ ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇನ್ನು ಬೆಂಸ್ಕಾ ಪರ ವಕೀಲರು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸಿದ್ದಪಡಿಸಿದ್ದ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿ, ವಿದ್ಯುತ್ ಕಾಯ್ದೆ-2013ರ ಸೆಕ್ಷನ್ 67(2) ಪ್ರಕಾರ ಅಗತ್ಯವಿದ್ದರೆ ಮಾತ್ರ ವಿದ್ಯುತ್ ಲೇನ್ ಮತ್ತು ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕಷ್ಟೇ ಎಂದರು.