ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಬಿ. ಶರತ್ ಅವರನ್ನು ತೆರವು ಮಾಡಿ, ಆ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿದ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ತೀರ್ಪನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಕಾಯ್ದಿರಿಸಿದೆ.
ಯಾವುದೇ ಕಾರಣ ನೀಡದೆ ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ, ಐಎಎಸ್ ಅಧಿಕಾರಿ ಬಿ. ಶರತ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಪೂರ್ಣಗೊಳಿಸಿದ ಸಿಇಟಿ ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿದೆ.
ಸಿಇಟಿ ಎದುರು ವಾದ ಮಂಡಿಸಿರುವ ರಾಜ್ಯ ಸರ್ಕಾರ, ಅಧಿಕಾರಿ ಬಿ. ಶರತ್ ವರ್ಗಾವಣೆಯಾದ ಸೆಪ್ಟೆಂಬರ್ 29 ರಿಂದ ಈವರೆಗೆ ಕರ್ತವ್ಯಕ್ಕೆ ಹಾಜರಾಗಿಲ್ಲ. ರೇಷ್ಮೆ ಮಾರಾಟ ನಿಗಮದ ವ್ಯವಸ್ಥಾಪಕ ಹುದ್ದೆಯನ್ನು ಸ್ವೀಕರಿಸಿಲ್ಲ. ಬಿಹಾರ ಚುನಾವಣಾ ಕರ್ತವ್ಯಕ್ಕೆ ತೆರಳಿಲ್ಲ. ವರ್ಗಾವಣೆಯಾದ ಬಳಿಕ ಅನಾರೋಗ್ಯ ಕಾರಣ ನೀಡಿ ಸುದೀರ್ಘ ರಜೆ ಹಾಕಿದ್ದಾರೆ. ಮೈಸೂರು ಡಿಸಿ ಆಗಲು ಆರೋಗ್ಯಯುತ ಅಧಿಕಾರಿ ಅಗತ್ಯವಿದೆ. ಆದ್ದರಿಂದ ಅವರ ಅರ್ಜಿ ವಜಾಗೊಳಿಸಬೇಕೆಂದು ಸರ್ಕಾರ ಮನವಿ ಮಾಡಿದೆ.