ಬೆಂಗಳೂರು: ಬೇಗೂರು ಪೊಲೀಸ್ ಠಾಣೆಯಲ್ಲಿ ನಿನ್ನೆ ಸಂಜೆಯಿಂದ ಫುಲ್ ಹೈಡ್ರಾಮಾ ನಡೆಯುತ್ತಿದ್ದು, ಠಾಣೆಯ ಇನ್ಸ್ಪೆಕ್ಟರ್ ಪೋಸ್ಟ್ಗೆ ಇಬ್ಬರ ನಡುವೆ ಕಿತ್ತಾಟ ಮುಂದುವರಿದಿದೆ.
ಇನ್ಸ್ಪೆಕ್ಟರ್ ಮಂಜು ಎಸ್.ಎಸ್ ಹಾಗೂ ಶಿವಕುಮಾರ್ ನಡುವೆ ಕಿತ್ತಾಟ ನಡೆಯುತ್ತಿದ್ದು. ಮೂರು ದಿನಗಳ ಹಿಂದೆ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಇಲಾಖೆ ಆದೇಶ ಹೊರಡಿಸಿತ್ತು.
ಎಸ್.ಎಸ್ ಮಂಜು ಜಾಗಕ್ಕೆ ಶಿವಕುಮಾರ್ ಮುಚ್ಚಂಗಿ ವರ್ಗಾವಣೆ ಆಗಿದ್ದಾರೆ. ಇನ್ಸ್ಪೆಕ್ಟರ್ ಮಂಜು ಅವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಸ್ಟೇಷನ್ ಬಿಟ್ಟು ಕೊಡಲು ಎಸ್.ಎಸ್ ಮಂಜು ಈಗಲೂ ನಿರಾಕರಿಸುತ್ತಿದ್ದು ಜಗಳ ಮೇಲಾಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.
ಸೋಮವಾರ ಸಂಜೆ 6 ಗಂಟೆಗೆ ಚಾರ್ಜ್ಗಾಗಿ ಹೋಗಿದ್ದ ಶಿವಕುಮಾರ್ಗೆ ಅಧಿಕಾರ ಹಸ್ತಾಂತರಿಸದೆ ಎಸ್.ಎಸ್ ಮಂಜು ಠಾಣೆಯಿಂದ ಹೊರನಡೆದಿದ್ದರು. ಸ್ಟೇಷನ್ ಪ್ರಮುಖ ವಸ್ತುಗಳಾದ ಡೈರಿ ಹಾಗೂ ಜೀಪ್ ಸಮೇತ ತೆರಳಿದ್ದರು.