ಕರ್ನಾಟಕ

karnataka

ETV Bharat / state

ರಾಜ್ಯ ಸಿಐಡಿಯಿಂದ ಸೈಬರ್ ತನಿಖಾ ತರಬೇತಿ ಪಡೆಯಲು ಆಸಕ್ತಿ ತೋರಿದ ಅನ್ಯ ರಾಜ್ಯಗಳ ಪೊಲೀಸರು - ಸಿಐಡಿ ಸೈಬರ್ ಕ್ರೈಂ ತರಬೇತಿ

ರಾಜ್ಯದ ಸಿಐಡಿ ಸೈಬರ್​ ತರಬೇತಿ ಕೇಂದ್ರದಲ್ಲಿ ಬೇರೆ ರಾಜ್ಯಗಳ ಪೊಲೀಸ್​ ಇಲಾಖೆಗಳು ತರಬೇತಿ ಪಡೆಯಲು ಆಸಕ್ತಿ ತೋರಿಸುತ್ತಿವೆ.

ಸೈಬರ್ ತನಿಖಾ ತರಬೇತಿ
ಸೈಬರ್ ತನಿಖಾ ತರಬೇತಿ

By ETV Bharat Karnataka Team

Published : Dec 20, 2023, 10:46 AM IST

Updated : Dec 20, 2023, 12:29 PM IST

ಬೆಂಗಳೂರು: ರಾಜ್ಯದ ಸಿಐಡಿ ಸೈಬರ್ ತರಬೇತಿ ಕೇಂದ್ರ ದೇಶದಲ್ಲೇ ಉತ್ತಮ ತರಬೇತಿ ಕೇಂದ್ರ ಎನಿಸುತ್ತಿದ್ದು, ಸೇನೆಯ ಮೂರು ಪಡೆಗಳು, ಕೇರಳ ಪೊಲೀಸ್ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಪೊಲೀಸ್ ಇಲಾಖೆಗಳು ಇಲ್ಲಿ ತರಬೇತಿ ಪಡೆಯಲು ಆಸಕ್ತಿ ತೋರಿಸುತ್ತಿವೆ ಎಂದು ತಿಳಿದು ಬಂದಿದೆ.

ಸೈಬರ್ ತನಿಖಾ ತರಬೇತಿ

ಇತ್ತೀಚಿನ ದಿನಗಳಲ್ಲಿ ನಾಗರಿಕ ಸಮಾಜಕ್ಕೆ ಮಾರಕವಾಗಿರುವ ಡೀಪ್ ಫೇಕ್ ಮತ್ತು ಡಾರ್ಕ್ ವೆಬ್ ಆಧರಿತ ಅಪರಾಧ ಪ್ರಕರಣಗಳಿಗೆ ಠಕ್ಕರ್‌ ನೀಡಲು ಸಿದ್ಧತೆ ನಡೆಸುತ್ತಿರುವ ರಾಜ್ಯದ ಸಿಐಡಿ ಸೈಬರ್ ಕ್ರೈಂ ಮತ್ತೊಂದು ಹಿರಿಮೆಗೆ ಭಾಜನವಾಗುತ್ತಿದೆ. ಡೀಪ್ ಫೇಕ್ ಮತ್ತು ಡಾರ್ಕ್ ವೆಬ್ ಆಧರಿತ ಅಪರಾಧಗಳಿಗೆ ಕಡಿವಾಣ ಹಾಕಲು ಸಿಬ್ಬಂದಿಗಳಿಗೆ ಹೊಸ ತಂತ್ರಜ್ಞಾನಧಾರಿತ ತರಬೇತಿ ಕೌಶಲ್ಯ ಒದಗಿಸಲು ಸಿಐಡಿ ಸಜ್ಜಾಗಿದೆ. ದೇಶ, ವಿದೇಶಗಳ ತಜ್ಞರು ತರಬೇತಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೈಬರ್ ಸೆಕ್ಯುರಿಟಿ ಹಾಗೂ ಡಾಟಾ ಪ್ರೊಟೆಕ್ಷನ್ ಕುರಿತು ತರಬೇತಿ: ರಾಜ್ಯದ ಸಿಐಡಿ ಘಟಕ, ಇನ್ಫೋಸಿಸ್ ಹಾಗೂ ಡಾಟಾ ಸೆಕ್ಯೂರಿಟಿ ಸೈನ್ಸ್ ಆಫ್ ಇಂಡಿಯಾದ ಸಹಯೋಗದಲ್ಲಿ ನೀಡಲಾಗುವ ತರಬೇತಿಯನ್ನ ಈಗಾಗಲೇ ರಾಜ್ಯದ ಸಿಇಎನ್ ಠಾಣೆಗಳ ಪೊಲೀಸ್ ಸಿಬ್ಬಂದಿ ಮತ್ತಿತರ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಶೀಘ್ರದಲ್ಲೇ ಹಂತಹಂತವಾಗಿ ಕೇರಳ ಪೊಲೀಸ್, ಸೇನೆಯ ಪಡೆಗಳು ಮತ್ತಿತರ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಸೇನೆಯ ಪಡೆಗಳಿಗೆ ಪ್ರಮುಖವಾಗಿ ಸೈಬರ್ ಸೆಕ್ಯುರಿಟಿ ಹಾಗೂ ಡಾಟಾ ಪ್ರೊಟೆಕ್ಷನ್ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಸಿಐಡಿ ಪೊಲೀಸ್‌ ಮಹಾ ನಿರ್ದೇಶಕ ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ.

ಸೈಬರ್ ತನಿಖಾ ತರಬೇತಿ

ಸೈಬರ್ ಕ್ರೈಂ ವಿರುದ್ಧದ ಕೌಶಲ್ಯ ಅಭಿವೃದ್ದಿಗೆ ತರಬೇತಿ: ಸಿಐಡಿಯಲ್ಲಿ ಪ್ರತೀ ಸೈಬರ್ ಕ್ರೈಂ ವಿರುದ್ಧದ ಕೌಶಲ್ಯ ಅಭಿವೃದ್ದಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿಯವರೆಗೂ 58 ನ್ಯಾಯಾಂಗ ಅಧಿಕಾರಿಗಳು, 31 ಸಿಇಎನ್ ಪೊಲೀಸ್ ಠಾಣೆ, 30 ನ್ಯಾಯಾಂಗ ಅಕಾಡೆಮಿ ಹಾಗೂ 975 ಶಿಕ್ಷಣ ಸಂಸ್ಥಗಳಿಗೆ ತರಬೇತಿ ನೀಡಲಾಗಿದೆ. ಇಷ್ಟೇ ಅಲ್ಲದೇ ಸೈಬರ್ ತನಿಖೆ ಕುರಿತ ಮೂರು ಕೈಪಿಡಿಗಳನ್ನ ರಾಜ್ಯದ ಸಿಐಡಿ ಪೊಲೀಸರ ತಂಡ ಬಿಡುಗಡೆ ಮಾಡಿದೆ. ಇನ್ನೂ ಎರಡು ಅತ್ಯಾಧುನಿಕ ಕೈಪಿಡಿಗಳನ್ನ ಸಿದ್ದಗೊಳಿಸಿದ್ದು, ಶೀಘ್ರದಲ್ಲೆ ಬಿಡುಗಡೆಗೊಳಿಸಿದೆ. ಸಿಐಡಿ ಬಿಡುಗಡೆ ಮಾಡಿರೋ ಕೈಪಿಡಿ ಸದ್ಯ ದೇಶದ ಹಲವು ಪೊಲೀಸ್ ಇಲಾಖೆಗಳಲ್ಲಿ ಸೈಬರ್ ಕ್ರೈಂ ಪತ್ತೆಕಾರ್ಯಕ್ಕೆ ನೆರವಾಗುವಂತೆ ಬಳಸಲಾಗುತ್ತಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.

ಸೈಬರ್ ತನಿಖಾ ತರಬೇತಿ

ಸಿಐಡಿ ಸೈಬರ್ ಕ್ರೈಂ ತರಬೇತಿ ಹೇಗಿರುತ್ತದೆ: ಪ್ರಮುಖವಾಗಿ ಸೈಬರ್ ಅಪರಾಧಗಳ ವಿರುದ್ಧ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳು ಹಾಗೂ ಅಪರಾಧಗಳು ನಡೆದ ನಂತರದ ತನಿಖೆಯ ಹಂತಗಳ ಕುರಿತು ಚರ್ಚೆ ಹಾಗೂ ತರಬೇತಿ ನೀಡಲಾಗುತ್ತದೆ. ದೇಶ ವಿದೇಶಗಳ ನುರಿತ ಸೈಬರ್ ಸೆಕ್ಯುರಿಟಿ ತಜ್ಞರು ಈ ತರಬೇತಿ ಶಿಬಿರದಲ್ಲಿರುತ್ತಾರೆ. ಸೈಬರ್ ಅಪರಾಧ (ಆರ್ಥಿಕ ಅಪರಾಧ‌/ವೈಯಕ್ತಿಕ ಹಿನ್ನೆಲೆಯ ಅಪರಾಧ/ಡಾಟಾ ಕಳುವು/ಸುಳ್ಳು ಸುದ್ದಿ ಹರಡುವಿಕೆ) ಪ್ರಕರಣಗಳು ವರದಿಯಾದಾಗ ತನಿಖಾಧಿಕಾರಿ ಮೊದಲು ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳೇನು? ಠಾಣೆಗಳಲ್ಲಿ ವರದಿಯಾಗುತ್ತಿರುವ ಹೊಸ ಮಾದರಿಯ ಸೈಬರ್ ಪ್ರಕರಣಗಳು, ಇತ್ತೀಚಿನ ದಿನಗಳಲ್ಲಿ ಹೆಚ್ಚು ವರದಿಯಾಗುತ್ತಿರುವ ಪ್ರಕರಣಗಳು, ಅವುಗಳ ವಿರುದ್ಧದ ತನಿಖಾ ಹಂತಗಳು, ಹಣ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವರದಿಯಾಗುವ ಪ್ರಕರಣಗಳ ತನಿಖಾ ಕಾಲದಲ್ಲಿ ಎದುರಾಗುವ ಸವಾಲುಗಳ ಮತ್ತು ಅವಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರಿಂದ ತರಬೇತಿ ಕೊಡಿಸಲಾಗುತ್ತದೆ.

ಸೈಬರ್ ತನಿಖಾ ತರಬೇತಿ

ಡಾಟಾ ಕಳವು, ಹ್ಯಾಕಿಂಗ್​ನಂತಹ ಪ್ರಕರಣಗಳ ತಡೆಯುವಿಕೆಯಲ್ಲಿ ಮುನ್ನೆಚ್ಚರಿಕೆ, ಬೃಹತ್ ಪ್ರಮಾಣದ ಡಾಟಾ ಸೋರಿಕೆಯಾಗದಂತೆ ವಹಿಸಬೇಕಾದ ಎಚ್ಚರಿಕೆ, ಬಳಸಬೇಕಿರುವ ಭದ್ರತಾ ಕ್ರಮಗಳು, ಅಗತ್ಯ ಸಾಫ್ಟ್‌ವೇರ್​​ಗಳ ಬಳಕೆಯ ಕುರಿತು ಹಂತಹಂತವಾಗಿ ವಿವರಣೆ ನೀಡಲಾಗುತ್ತದೆ. ಹೊಸ ಮಾದರಿಯ ಡೀಪ್ ಫೇಕ್​​ ನಂತಹ ಪ್ರಕರಣಗಳ ವಿರುದ್ಧ ಪರಿಣಾಮಕಾರಿಯಾಗಿ ಫ್ಯಾಕ್ಟ್ ಚೆಕ್ ಮತ್ತು ಅಂತಹ ವಂಚನೆಗಳಾಗದಂತೆ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ನೀಡಲು ಅಗತ್ಯವಿರುವ ಅಂಶಗಳನ್ನ ತರಬೇತಿಯಲ್ಲಿ ಕಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಇದನ್ನೂ ಓದಿ:ಎಲ್ಲೆಂದರಲ್ಲಿ ಆಧಾರ್, ಪ್ಯಾನ್ ಕಾರ್ಡ್ ಕೊಡುವ ಮುನ್ನ ಎಚ್ಚರ: 6 ಸೈಬರ್​ ಕ್ರೈಂ ವಂಚಕರ ಬಂಧನ

Last Updated : Dec 20, 2023, 12:29 PM IST

ABOUT THE AUTHOR

...view details