ಬೆಂಗಳೂರು :ಪಾಲಿಕೆಯ ವೈದ್ಯರು ಹಾಗೂ ಮಕ್ಕಳ ತಜ್ಞರಿಗೆ ‘ಮಕ್ಕಳಲ್ಲಿ ಕೋವಿಡ್-19 ಸೋಂಕು ನಿರ್ವಹಣೆ’ಯ ತರಬೇತಿ ಕಾರ್ಯಾಗಾರವನ್ನು ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿತ್ತು. ಇದೇ ವೇಳೆ ನಗರದಲ್ಲಿ ಮಕ್ಕಳ ಚಿಕಿತ್ಸೆಗೆ ಕೆಲವು ಆಸ್ಪತ್ರೆ ಗುರುತು ಮಾಡಲಾಗುತ್ತಿದೆ. ಪದ್ಮನಾಭನಗರದಲ್ಲಿ ಮಕ್ಕಳಿಗಾಗಿ ಬೇಕಾದ ಬೆಡ್ ವ್ಯವಸ್ಥೆ, ಚಿಕಿತ್ಸೆ ವ್ಯವಸ್ಥೆ, ಪೋಷಕರು ಜೊತೆಗಿರಲು ಬೇಕಾದ ಕ್ಯಾಬಿನ್ ವ್ಯವಸ್ಥೆ ಹೀಗೆ ಮಾದರಿ ಆಸ್ಪತ್ರೆಯನ್ನು ಸಜ್ಜು ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದರೆ ಇರಬಹುದಾದ ಸೋಂಕು ಲಕ್ಷಣಗಳು, ಎಸಿಮ್ಟಮ್ಯಾಟಿಕ್, ಮೈಲ್ಡ್, ಸಿವಿಯರ್ ಲಕ್ಷಣಗಳನ್ನು ಹೇಗೆ ಪತ್ತೆ ಹಚ್ಚುವುದು. ಯಾವ ಸೋಂಕಿನ ಲಕ್ಷಣ ಇರುವವರಿಗೆ, ಯಾವ ಮೆಡಿಸಿನ್ಗಳನ್ನು ನೀಡಬಹುದು ಎಂಬುದಾಗಿ ಡಾ. ಶಿವಪ್ರಕಾಶ್ ಸೋಸಲೆ ಮಾಹಿತಿ ನೀಡಿದರು. ಅಪೊಲೋ ಆಸ್ಪತ್ರೆಯ ಡಾ. ಜಯಶ್ರೀ ಅವರು ಮಕ್ಕಳ ಸ್ಯಾಂಪಲ್ ಕಲೆಕ್ಷನ್, ಅದರ ಸಾಗಾಣಿಕೆ, ಪ್ರಯೋಗಾಲಯಗಳ ಸ್ಯಾಂಪಲ್ ಪರೀಕ್ಷೆ ಹಾಗೂ ಪತ್ತೆ ಹಚ್ಚುವಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್, ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ, ನಿಮ್ಹಾನ್ಸ್ ನಿರ್ದೇಶಕರಾದ ಡಾ.ಸತೀಶ್ ಚಂದ್ರ, ಕುಲಸಚಿವರಾದ ಡಾ. ಶಂಕರ್ ರಾವ್, ವಲಯ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ತರಬೇತಿ ಕಾರ್ಯಕ್ರಮ ಆಯೋಜಿಸಿದ ಡಾ.ಪ್ರಶಾಂತ್ ಭಾಗಿಯಾಗಿದ್ದರು.
ಸುನಾಮಿಯಂತೆ ಬರಲಿದೆ 3ನೇ ಅಲೆ
ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಮಾತನಾಡಿ, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಮಕ್ಕಳಲ್ಲಿ 3ನೇ ಅಲೆಯ ಕೋವಿಡ್ ರೋಗ ಬಂದರೆ, ಹೇಗೆ ನಿರ್ವಹಣೆ ಮಾಡಬೇಕು, ಯಾವ ರೀತಿ ಸಿದ್ಧವಾಗಿರಬೇಕೆಂದು ಕಾರ್ಯಾಗಾರ ನಡೆದಿದೆ. ಮಕ್ಕಳಿಗೆ ವ್ಯಾಕ್ಸಿನ್ ಹಾಕದೇ ಇರುವುದರಿಂದ ಮಕ್ಕಳಿಗೇ ಹೆಚ್ಚು ಕೋವಿಡ್ ಬಾಧಿಸಲಿದೆ ಎಂದು ಹೇಳಲಾಗ್ತಿದೆ. ಹೀಗಾಗಿ, ಏಕಾಏಕಿ ಸುನಾಮಿಯಂತೆ ಬರುವ ಕೋವಿಡ್ಗೆ ಮೊದಲೇ ಸಜ್ಜುಗೊಳ್ಳಬೇಕಿದೆ ಎಂದು ಎಚ್ಚರಿಸಿದರು.