ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆ ಕಂಡಿದೆ. 2022ರಲ್ಲಿ 1,04,55,677 ಪ್ರಕರಣಗಳನ್ನು ದಾಖಲಿಸಿದ್ದ ಸಂಚಾರಿ ಪೊಲೀಸರು, 2023ನೇ ಸಾಲಿನ ನವೆಂಬರ್ ಅಂತ್ಯದವರೆಗಿನ ಮಾಹಿತಿಯನ್ವಯ 83,97,572 ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಅಜಾಗರೂಕ ಚಾಲನೆ, ಅತಿವೇಗದ ಚಾಲನೆ, ಪರವಾನಗಿರಹಿತ ವಾಹನ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾದರೆ, ಸಿಗ್ನಲ್ ಜಂಪ್‌ನಂಥ ಪ್ರಕರಣಗಳು ದುಪ್ಪಟ್ಟಾಗಿವೆ.
2022ರಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಇಂಡಿಯನ್ ಮೋಟಾರ್ ವಾಹನ ಕಾಯ್ದೆಯಡಿ 8,28,976 ಪ್ರಕರಣ, ಕರ್ನಾಟಕ ಪೊಲೀಸ್ ಕಾಯ್ದೆಯಡಿ 2772 ಪ್ರಕರಣ, ಟೋಯಿಂಗ್ ಸಂಬಂಧಿಸಿದಂತೆ 3,334 ಪ್ರಕರಣ ಹಾಗೂ 96,20,595 ಆಟೋಮೇಷನ್ ಪ್ರಕರಣಸಹಿತ ಒಟ್ಟು 1,04,55,677 ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ 2023ರಲ್ಲಿ (ನವೆಂಬರ್ ಅಂತ್ಯದವರೆಗೆ) ಇಂಡಿಯನ್ ಮೋಟಾರ್ ವಾಹನ ಕಾಯ್ದೆಯಡಿ 2,34,513 ಪ್ರಕರಣ, ಕರ್ನಾಟಕ ಪೊಲೀಸ್ ಕಾಯ್ದೆಯಡಿ 868 ಪ್ರಕರಣ ಹಾಗೂ ಆಟೋಮೇಷನ್ ತಂತ್ರಜ್ಞಾನದನ್ವಯ 81,62,191 ಪ್ರಕರಣಗಳ ಸಹಿತ ಒಟ್ಟು 83,97,572 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರಕರಣವಾರು ಅಂಕಿಅಂಶ-ಇಳಿಕೆಯಾದ ಪ್ರಕರಣಗಳು:2022ರಲ್ಲಿ 11,042 ಅಜಾಗರೂಕ ವಾಹನ ಚಾಲನೆ ಪ್ರಕರಣಗಳು ಹಾಗೂ 50,095 ಅತಿವೇಗದ ವಾಹನ ಚಾಲನೆಯ ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಕ್ರಮವಾಗಿ 2675 ಹಾಗೂ 2182 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ಚಾಲಕ ಹೆಲ್ಮೆಟ್‌ರಹಿತ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಆರೋಪದಡಿ 43,92,381 ಪ್ರಕರಣಗಳು ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಆರೋಪದಡಿ 26,08,122 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಕ್ರಮವಾಗಿ ಅಂಥ 37,71,103 ಹಾಗೂ 11,76,832 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2022ರಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದಡಿ 26,371 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ 5384 ಪ್ರಕರಣಗಳು ದಾಖಲಾಗಿವೆ. ಇನ್ನು 12,07,651 ನೋ ಪಾರ್ಕಿಂಗ್ ಪ್ರಕರಣಗಳು 2022ರಲ್ಲಿ ದಾಖಲಾಗಿದ್ದರೆ ಈ ವರ್ಷ 10,78,461 ಪ್ರಕರಣಗಳು ದಾಖಲಾಗಿವೆ.