ಬೆಂಗಳೂರು: ಇಂದು ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26 ಕಿಲೋಮೀಟರ್ ರೋಡ್ ಶೋ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಬಿಜೆಪಿ ಪರ ಭರ್ಜರಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಜೆ.ಪಿ. ನಗರದಿಂದ ಮಲ್ಲೇಶ್ವರದ ಮಾರಮ್ಮ ದೇವಸ್ಥಾನದವರೆಗೂ ಸುಮಾರು 26 ಕಿಲೋ ಮೀಟರ್ ವರೆಗೂ ಶನಿವಾರ ರೋಡ್ ಶೋ ನಡೆಸಿ ಮತದಾರರ ಗಮನ ಸೆಳೆದ ಮೋದಿ ಭಾನುವಾರ 8 ಕಿಲೋ ಮೀಟರ್ ಬಹಿರಂಗ ಪ್ರಚಾರ ನಡೆಸಲಿದ್ದಾರೆ. ಇಂದು ರಾತ್ರಿ ರಾಜಭವನದಲ್ಲಿ ತಂಗಲಿರುವ ಮೋದಿ ನಾಳೆ ಬೆಳಗ್ಗೆ 10 ಗಂಟೆಯಿಂದ 11.30ರವರೆಗೂ ನಗರದ ಜನತೆ ಮುಂದೆ ಮತಯಾಚನೆ ನಡೆಸಲಿದ್ದಾರೆ. ಸುಮಾರು 8 ಕಿಲೋ ಮೀಟರ್ ವರೆಗೂ ರೋಡ್ ಶೋ ನಡೆಯುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಾಗಲಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.
ಇಂದು ನಗರದಲ್ಲಿ ರೋಡ್ ಶೋ ನಡೆಸಿ ಹುಬ್ಬಳ್ಳಿ ಪ್ರವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಸಂಜೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿ ರಾಜಭವನದಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 9:15ಕ್ಕೆ ರಾಜಭವನದಿಂದ ಮೆಖ್ರಿ ವೃತ್ತದ ಹೆಚ್.ಕ್ಯೂ.ಟಿ.ಸಿ ಹೆಲಿಪ್ಯಾಡ್ಗೆ ತಲುಪಲಿರುವ ಮೋದಿ, ಬೆಳಗ್ಗೆ 9.30ಕ್ಕೆ ಹೊರಟು 9.50ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಹಳೆ ವಿಮಾನ ನಿಲ್ದಾಣದ ಜಂಕ್ಷನ್ ಬಳಿ ಇರುವ ಸುರಂಜನ್ ದಾಸ್ ರಸ್ತೆ ತಲುಪಲಿರುವ ಮೋದಿ ಬಳಿಕ ಬೆಳಗ್ಗೆ 10ರಿಂದ 11.30 ರವರೆಗೂ ರೋಡ್ ಶೋ ನಡೆಸಲಿದ್ದಾರೆ.
ಹೊಸ ತಿಪ್ಪಸಂದ್ರ ರಸ್ತೆಯಲ್ಲಿರುವ ಕೆಂಪೇಗೌಡ ಪ್ರತಿಮೆಯಿಂದ ರೋಡ್ ಶೋ ಆರಂಭವಾಗಲಿದ್ದು, ಹೆಚ್.ಎ.ಎಲ್ ಎರಡನೇ ಹಂತದ 80 ಅಡಿ ರಸ್ತೆ ಜಂಕ್ಷನ್, 12ನೇ ಮುಖ್ಯ ರಸ್ತೆ ಜಂಕ್ಷನ್, 100 ಅಡಿ ಜಂಕ್ಷನ್, ಇಂದಿರಾನಗರ, ಸುಬ್ರಮಣ್ಯಸ್ವಾಮಿ ದೇವಸ್ಥಾನದ ಮೂಲಕ ಎಂಜಿ ರಸ್ತೆಗೆ ತಲುಪಿ ಟ್ರಿನಿಟಿ ಸರ್ಕಲ್ನಲ್ಲಿ ರೋಡ್ ಶೋ ಕೊನೆಗೊಳಿಸಲಾಗುತ್ತದೆ.