ಬೆಂಗಳೂರು :ಮಾನವೀಯ ಮೌಲ್ಯಗಳೇ ಕಣ್ಮರೆಯಾಗುತ್ತಿರುವ ಆತಂಕದ ಸ್ಥಿತಿಯ ನಡುವೆಯೂ ಹೆಚ್ಎಎಲ್ ಏರ್ಪೋರ್ಟ್ ಸಂಚಾರಿ ಠಾಣೆ ಪೊಲೀಸರು ಮನುಷ್ಯತ್ವ ಮೆರೆದಿದ್ದಾರೆ. ಅಪಘಾತದಿಂದ ನರಳಾಡುತ್ತ ಗೊತ್ತು-ಗುರಿಯಿಲ್ಲದ ವ್ಯಕ್ತಿಯನ್ನು ಆಸ್ಪತ್ರೆಗೆದಾಖಲಿಸಿ ಮಾನವೀಯತೆ ಇನ್ನೂ ಬದುಕಿದೆ ಎಂದು ಸಾಬೀತುಪಡಿಸಿದ್ದಾರೆ.
ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಚನ್ನೇಶ್ ನೇತೃತ್ವದಲ್ಲಿ ಕಾನ್ಸ್ಟೇಬಲ್ಗಳಾದ ಕಾಶಪ್ಪ, ಚಿರಂಜೀವಿ ಎಂಬುವರು ಸೇರಿ ಇನ್ನಿತರ ಸಿಬ್ಬಂದಿಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಷ್ಟ ಕಾಲದಲ್ಲಿ ಸ್ಪಂದಿಸಿದ ಪೊಲೀಸರಿಗೆ ಚೇತರಿಸಿಕೊಂಡ ಗಾಯಾಳು ಕೃತಜ್ಞತೆ ಸಲ್ಲಿಸಿದ್ದಾರೆ.
ಪೊಲೀಸರ ಮಾನವೀಯ ನಡೆಗೆ ಅಭಿನಂದನೆ ಕಳೆದ ಆಗಸ್ಟ್ 16ರಂದು ಮಾರತ್ಹಳ್ಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂಜಯ್ ಎಂಬುವರಿಗೆ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ಸಂಜಯ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರು. ಇದನ್ನು ಕಂಡು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಚಿಕಿತ್ಸೆಗಾಗಿ ಪೊಲೀಸರು ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ತಲೆಗೆ ತೀವ್ರ ಪೆಟ್ಟಾಗಿ ಕೋಮಾಗೆ ಹೋಗಿದ್ದ ಗಾಯಾಳು ಸಂಜಯ್ ಅವರನ್ನು ಶಸ್ತ್ರ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು. ತಕ್ಷಣವೇ ನಿಮ್ಹಾನ್ಸ್‌ಗೆ ಕರೆದೊಯ್ದು ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ಆಪರೇಷನ್ ಬಳಿಕ 15 ದಿನದವರೆಗೂ ಸಂಜಯ್ ಕೋಮಾ ಸ್ಥಿತಿಯಲ್ಲೇ ಇದ್ದರು. ಈಗ ಅವರಿಗೆ ಪ್ರಜ್ಞೆ ಬಂದಿದೆ.
ಕೋಮಾಗಿ ಹೋಗಿದ್ದ ಸಂಜಯ್ ಈಗ ಸಂಪೂರ್ಣ ಚೇತರಿಕೆ ಈತನ ಹಿನ್ನೆಲೆ ಕಲೆ ಹಾಕಿದಾಗ ಸಂಜಯ್ ಮಹಾರಾಷ್ಟ್ರ ಮೂಲದವರೆಂದು ತಿಳಿದು ಬಂದಿದೆ. ನಗರದಲ್ಲಿ ಗಾರೆ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಸಂಜಯ್ ಚಿಕಿತ್ಸೆ ಪಡೆಯುವಾಗ ಸ್ನೇಹಿತರು ಯಾರೂ ಬಂದಿರಲಿಲ್ಲ. ದಾಖಲಾಗಿದ್ದ ಆಸ್ಪತ್ರೆಯಲ್ಲಿ ತಮ್ಮ ಪಾಳಿಯಂತೆ ಕಾನ್ಸ್ಟೇಬಲ್ಗಳಾದ ಕಾಶಪ್ಪ, ಚಿರಂಜೀವಿ ಹಾಗೂ ಶ್ರೀಕಾಂತ್ ಸೇರಿ ಇನ್ನಿತರ ಸಿಬ್ಬಂದಿ ಸಂಜಯ್ನನ್ನು ಗುಣಮುಖನಾಗುವವರೆಗೂ ಉಪಚರಿಸಿದ್ದಾರೆ. ಬಳಿಕ ಸೆ. 19ರಂದು ಡಿಸ್ಚಾರ್ಜ್ ಆಗಿದ್ದ ಸಂಜಯ್ಗೆ ಬಸ್‌ಚಾರ್ಜ್ ನೀಡಿ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಹೆಚ್ಎಎಲ್ ಏರ್ಪೋರ್ಟ್ ಸಂಚಾರಿ ಪೊಲೀಸ್ ಠಾಣೆ ಪೊಲೀಸರ ಮಾನವೀಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಅಪಘಾತಕ್ಕೆ ಕಾರಣನಾದ ಸವಾರ ಬೈಕ್ ಬಿಟ್ಟು ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರಿಗೆ, ಬೈಕ್ ನೋಂದಣಿ ಸಂಖ್ಯೆ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.