ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಕಡಿಮೆ ಮಾಡುತ್ತಿರುವ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರುವವರ ವಿರುದ್ಧ ಸದ್ದಿಲ್ಲದೆ ಹೊಸ ಅಸ್ತ್ರ ಪ್ರಯೋಗಕ್ಕೆ ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಕಳೆದೆರಡು ವಾರಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಗರಿಷ್ಠ ವಾಹನ ದಟ್ಟಣೆ ಇರುವ ಸಮಯದಲ್ಲಿ ಕಚೇರಿಗಳಿಗೆ ತಲುಪುವ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ಹಿಂದೆ ರಸ್ತೆ ಬದಿ ನಿಂತು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದವರಿಗೆ ದಂಡ ಹಾಕುತ್ತಿದ್ದ ಸಂಚಾರಿ ಪೊಲೀಸರು, ಈಗ ಟ್ರಾಫಿಕ್ ನಿಯಂತ್ರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ವಾಹನ ದಟ್ಟಣೆ ನಿಯಂತ್ರಿಸಲು ಹೊಸ ಪ್ಲಾನ್: ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಓಡಾಡುವ ವಾಹನ ಸವಾರರ ಮನೆ ಬಾಗಿಲಿಗೆ ದಂಡದ ರಶೀದಿ ಕಳುಹಿಸಲು ಹೊಸ ಯೋಜನೆಯನ್ನು ಪೊಲೀಸರು ರೂಪಿಸಿದ್ದಾರೆ. ನಗರದಲ್ಲಿ ಈಗಾಗಲೇ ತಂತ್ರಜ್ಞಾನ ಬಳಸಿಕೊಂಡು ದಂಡದ ರಶೀದಿ ಮನೆಗೆ ತಲುಪಿಸುವ ಯೋಜನೆ ಜಾರಿಯಲ್ಲಿದೆ. ಆದರೆ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದು ಪ್ರತಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ಹಾಕಲು ಮುಂದಾಗಿದ್ದಾರೆ.