ಆನೇಕಲ್: ಬೆಂಗಳೂರು ಜಿಲ್ಲೆಯಲ್ಲಿ ಕೊಲೆಗಳಿಗಿಂತ ರಸ್ತೆ ಅಪಘಾತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸಾವುಗಳು ಸಂಭವಿಸಿವೆ. ವರ್ಷಕ್ಕೆ 60-65 ಕೊಲೆಗಳು ನಡೆದರೆ, ರಸ್ತೆ ಅಪಘಾತದಲ್ಲಿ 500-550 ಕೊಲೆಗಳು ನಡೆದಿರುವುದು ದಾಖಲಾಗಿದೆ. ಇದಕ್ಕಾಗಿ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಅನಿವಾರ್ಯತೆಯಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಎಸ್ಎಫ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗು ಎನ್ಸಿಸಿ ತಂಡದೊಂದಿಗೆ ಏರ್ಪಡಿಸಲಾಗಿದ್ದ ರಸ್ತೆ ಸುರಕ್ಷತೆಯ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು ಅಪರಾಧ ಪ್ರಕರಣಗಳ ದಾಖಲೀಕರಣಕ್ಕೆ ಹೋಲಿಸಿದರೆ ಶೇಕಡ 10ರಷ್ಟು ರಸ್ತೆ ನಿಯಮ ಉಲ್ಲಂಘನೆಯ ಪ್ರಕರಣಗಳೇ ಹೆಚ್ಚು ಠಾಣೆಗೆ ಬರುತ್ತದೆ. ಕೇವಲ ರ್ಯಾಲಿಗೆ ಮಾತ್ರ ಸೀಮಿತವಲ್ಲದೆ ಪ್ರತಿದಿನ ರಸ್ತೆ ನಿಯಮಗಳನ್ನು ಪಾಲಿಸಬೇಕು ಮತ್ತು ವಿದ್ಯಾರ್ಥಿಗಳು ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.
ಚಂದಾಪುರದಲ್ಲಿ ಸಂಚಾರ ಠಾಣೆ ಶೀಘ್ರ:ಈಗಾಗಲೇ ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯ ಆನೇಕಲ್ ಭಾಗದಲ್ಲಿ ಹೆದ್ದಾರಿ ಸಂಚಾರ ನಿಯಮ ಪಾಲಿಸಲು ಸಂಚಾರ ಠಾಣೆಯನ್ನು ಚಂದಾಪುರದಲ್ಲಿ ತೆರೆಯುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಈಗಿರುವ ಪೊಲೀಸ್ ಸಿಬ್ಬಂದಿ ಕೊರತೆಯ ನಡುವೆ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲು ನೆಲಮಂಗಲದಲ್ಲಿ ಮಾತ್ರ ಸಂಚಾರ ಠಾಣೆ ಇತ್ತು. ಇದೀಗ ಹೊಸಕೋಟೆಯಲ್ಲಿ ಚಾಲನೆ ದೊರೆತಿದೆ. ಇನ್ನು, ದೊಡ್ಡಬಳ್ಳಾಪುರ ಹಾಗೂ ಆನೇಕಲ್ ಭಾಗಕ್ಕೆ ಸಂಚಾರ ಪೊಲೀಸ್ ಠಾಣೆ ತೆರೆಯುವ ಭರವಸೆಯಿದೆ ಎಂದು ಎಸ್ಪಿ ತಿಳಿಸಿದರು.