ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ನಿಯಮಗಳ ಗಾಳಿಗೆ ತೂರಿ ಅದ್ದಾದಿಡ್ಡಿ ವಾಹನ ಚಲಾಯಿಸಿ ದಿನದಲ್ಲಿ ಸಾವಿರಾರು ಮಂದಿ ಪೊಲೀಸರ ಕೈಗೆ ಸಿಕ್ಕಿ ಫೈನ್ ಕಟ್ಟಿ ಮುಂದೆ ಹೋಗ್ತಾರೆ. ಆದರೆ, ಸಂಚಾರಿ ನಿಯಮಗಳ ಪಾಲಿಸುವಂತೆ ಟ್ರಾಫಿಕ್ ಪೊಲೀಸರು ಇನ್ನಿಲ್ಲದ ಕ್ರಮಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಆ ಮೂಲಕ ವಾಹನ ಸವಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೂ ಮುಂದಾಗಿದ್ದರು.
ಆದರೆ, ವಾಹನ ಸವಾರರು ಮಾತ್ರ ಇದಕ್ಕೆಲ್ಲ ಕ್ಯಾರೆ ಎನ್ನದೇ ಸಂಚಾರಿ ನಿಯಮಗಳನ್ನ ಪಾಲಿಸದಿರುವುದು ನಗರದೆಲ್ಲೆಡೆ ವರದಿಯಾಗುತ್ತಲೇ ಇದೆ. ಇದಕ್ಕಾಗಿ ಇನ್ಮುಂದೆ ಹಲವು ಬಾರಿ ಸಂಚಾರಿ ನಿಯಮಗಳ ಉಲ್ಲಂಘಿಸುವ ಸವಾರರಿಗೆ ಪೊಲೀಸರು ಶಾಕ್ ನೀಡಲು ಮುಂದಾಗಿದ್ದು, ನಿಯಮ ಪಾಲಿಸದ ಸವಾರರಿಗೆ ಪರೀಕ್ಷೆ ಬರೆಸಲು ಮುಂದಾಗಿದ್ದಾರೆ.
ರಿಪೀಟೆಡ್ ರೂಲ್ಸ್ ಬ್ರೇಕ್ ಮಾಡಿದಾಗ ಮನೆಗೆ ನಿಯಮ ಉಲ್ಲಂಘನೆ ಮಾಡಿದವರ ವಾಹನವನ್ನು ಠಾಣೆಗೆ ಕರೆದೊಯ್ಯಲಿದ್ದಾರೆ. ಎರಡು ಗಂಟೆಗಳ ಕಾಲ ಕ್ಲಾಸ್ ತೆಗೆದುಕೊಂಡು ನಂತರ ಎಕ್ಸಾಂ ಬರೆಸಲಿದ್ದಾರೆ. ಇದರಲ್ಲಿ ಟ್ರಾಫಿಕ್ ಸಂಬಂಧ ಪ್ರಶ್ನೆಗಳಿರಲಿದ್ದು, 100ಕ್ಕೆ 60 ಮಾರ್ಕ್ಸ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಒಂದು ವೇಳೆ 60 ಅಂಕ ಗಳಿಸುವಲ್ಲಿ ವಿಫಲರಾದರೆ ಅಂತಹವರ ಪರವಾನಗಿ ರದ್ದಾಗುವ ಸಾಧ್ಯತೆ ಇದೆ.
ಈ ಸಂಬಂಧ ಕೆಲವು ಪ್ರಕರಣ ನೋಡುವುದಾದರೆ
ಉಮೇಶ್ (ಹೆಸರು ಬದಲಿಸಲಾಗಿದೆ) ಎಂಬಾತ ನಿರಂತರವಾಗಿ 15 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಕಟ್ಟದೇ ಓಡಾಡುತ್ತಿದ್ದ, ಬಳಿಕ ಟ್ರಾಫಿಕ್ ಪೊಲೀಸರು ಆತನ ಮನೆ ಬಳಿ ತೆರಳಿ, ದಂಡ ವಿಧಿಸಿದಲ್ಲದೇ, ಅಲ್ಲಿಂದ ಅವರನ್ನು ಪರೀಕ್ಷೆಗಾಗಿ ಕರೆತಂದಿದ್ದಾರೆ. ಈ ವೇಳೆ ನಾನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿಲ್ಲ ಎಂದು ಪೊಲೀಸರ ವಿರುದ್ಧ ವಾಗ್ವಾದ ನಡೆಸಿದ್ದ ಬಳಿಕ ಥಣಿಸಂದ್ರದಲ್ಲಿರುವ ಟ್ರೈನಿಂಗ್ ಕ್ಯಾಂಪ್ಗೆ ಕರೆತಂದು ಸಿಸಿಟಿವಿಯಲ್ಲಿ ಆತ ಟ್ರಾಫಿಕ್ ಉಲ್ಲಂಘಿಸಿದ ದೃಶ್ಯ ತೋರಿಸಿದ್ದಾರೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಉಮೇಶ್ ಬಳಿಕ ಪರೀಕ್ಷೆ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾನೆ. ಇನ್ನು ಪರೀಕ್ಷೆಯಲ್ಲಿ 100ಕ್ಕೆ 75 ಅಂಕ ಪಡೆದು ಉತ್ತೀರ್ಣನಾಗಿ ಪರವಾನಗಿ ಉಳಿಸಿಕೊಂಡಿದ್ದಾರೆ.
ಇದೇ ರೀತಿ ಇನ್ನೋರ್ವ 100ಕ್ಕೆ 40 ಅಂಕ ಪಡೆದಿದ್ದರು. ಈತನ ಡಿಎಲ್ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ. ನಗರದಲ್ಲಿ ಈವರೆಗೆ 180 ವಾಹನ ಸವಾರರು ಅತೀ ಹೆಚ್ಚಿನ ಟ್ರಾಫಿಕ್ ನಿಯಮಗಳ ಬ್ರೇಕ್ ಮಾಡಿದ್ದು, ಆದರೂ ಸವಾರರು ದಂಡ ಕಟ್ಟಿಲ್ಲ. ಸದ್ಯ ದ್ವಿಚಕ್ರ ವಾಹನಗಳ ಸವಾರರಿಗೆ ಮಾತ್ರ ಪರೀಕ್ಷೆ ನಡೆಸುತಿದ್ದು, ದಿನಕ್ಕೆರಡು ಬ್ಯಾಚ್ನಂತೆ ಪರೀಕ್ಷೆಗಳು ನಡೆಯುತ್ತಿವೆ, ಮುಂಬರುವ ದಿನಗಳಲ್ಲಿ ನಾಲ್ಕು ಚಕ್ರದ ವಾಹನಗಳ ಸವಾರರಿಗೂ ನಿಯಮ ವಿಸ್ತರಿಸಲಿದ್ದಾರೆ.