ಬೆಂಗಳೂರು:ತಂತ್ರಜ್ಞಾನ ಬಳಸಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ವಿರುದ್ಧ ಸಂಪರ್ಕ ರಹಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿರುವ ಸಂಚಾರ ಪೊಲೀಸರು ಒನ್ ವೇ ಸಂಚಾರ, ನೋ ಪಾರ್ಕಿಂಗ್, ಫುಟ್ ಪಾತ್ಗಳಲ್ಲಿ ಪಾರ್ಕಿಂಗ್ ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ದ ಸವಾರರ ವಿರುದ್ಧ ಕಳೆದ ಆರು ತಿಂಗಳಲ್ಲಿ 5,280 ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ.
ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಲು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡಿರುವ ಸಂಚಾರ ಪೊಲೀಸರು, ಆತ್ಯಾಧುನಿಕ ಕ್ಯಾಮರಾಗಳ ಮೂಲಕ ಸಂಪರ್ಕರಹಿತವಾಗಿ ಉಲ್ಲಂಘನಾ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ ನಗರದಲ್ಲಿ ನೋ ಎಂಟ್ರಿಯಲ್ಲಿ ವಾಹನ ಸಂಚಾರ, ನೋ ಪಾರ್ಕಿಂಗ್ ಹಾಗೂ ಫುಟ್ ಪಾತ್ನಲ್ಲಿ ವಾಹನ ಸಂಚಾರದಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗಿವೆ. ಕಳೆದ ಆರು ತಿಂಗಳಲ್ಲಿ ಸಂಭವಿಸಿದ 2,354 ಅಪಘಾತಗಳಲ್ಲಿ 414 ಮಂದಿ ಬಲಿಯಾಗಿದ್ದಾರೆ. 2096 ವಾಹನ ಸವಾರರು ಗಾಯಗೊಂಡಿದ್ದಾರೆ. ಪ್ರತಿ ತಿಂಗಳು ಸರಾಸರಿ 70 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ.
ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿಸಿಕೊಂಡರೂ ಎಚ್ಚೆತ್ತುಕೊಳ್ಳದ ಸವಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೆ ಕ್ಯಾರೆ ಅನ್ನದ ಸವಾರರ ವಿರುದ್ಧ ಐಪಿಸಿ ಸೆಕ್ಷನ್ 283ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡಿದ್ದ ಸವಾರರ ವಿರುದ್ಧ 697 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಫುಟ್ ಪಾತ್ನಲ್ಲಿ ವಾಹನ ಸಂಚಾರದಡಿ 118, ಒನ್ ವೇ ಮಾರ್ಗದಲ್ಲಿ ಸಂಚರಿಸಿದವರ ವಿರುದ್ಧ 1772 ಕೇಸ್ ದಾಖಲಾದರೆ, ನೋ ಪಾರ್ಕಿಂಗ್ ಹಾಗೂ ರಾಂಗ್ ಪಾರ್ಕಿಂಗ್ ಮಾಡಿದ 2693 ಪ್ರಕರಣ ದಾಖಲಿಕೊಳ್ಳಲಾಗಿದ್ದು, ಒಟ್ಟು 5280 ಕೇಸ್ ದಾಖಲಾಗಿವೆ.