ಬೆಂಗಳೂರು :ತುಮಕೂರು ರಸ್ತೆಯಲ್ಲಿ ಕೆಲವೇ ದಿನಗಳ ಹಿಂದೆ ಪ್ರಾರಂಭವಾಗಿರುವ ಐಕಿಯಾ ಶಾಪಿಂಗ್ ಮಾಲ್ ಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚಳವಾಗತೊಡಗಿದೆ. ವಾರಾಂತ್ಯದಲ್ಲಿ ಮಾಲ್ ಗೆ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿರುವುದರಿಂದ ನಾಗಸಂದ್ರ ಮೆಟ್ರೊ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಜೂನ್ 22 ರಂದು ನಗರದ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿ ಗೃಹಪಯೋಗಿ ವಸ್ತುಗಳ ಐಕಿಯಾ ಶಾಪಿಂಗ್ ಮಾಲ್ ಪ್ರಾರಂಭವಾಗಿದ್ದು, ಇದು ಕೇವಲ ಗೃಹೋಪಯೋಗಿ ವಸ್ತುಗಳ ಮಾಲ್ ಆಗಿದೆ. ಇಲ್ಲಿ ಇತರೆ ಯಾವುದೇ ಸಿನಿಮಾ ಹಾಲ್ ಅಥವಾ ಇತರೆ ವಸ್ತುಗಳು ಲಭ್ಯವಿಲ್ಲ. ಹಾಗಾಗಿ ಸಾರ್ವಜನಿಕರು ಕೇವಲ ಗೃಹೋಪಯೋಗಿ ವಸ್ತುಗಳಿಗೆ ಮಾತ್ರ ಮಾಲ್‌ಗೆ ಬರುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ನೂತನ ಐಕಿಯಾ ಶಾಪಿಂಗ್ ಮಾಲ್ ಗೆ ಜನವೋ ಜನ: ನಾಗಸಂದ್ರ ಸುತ್ತಮುತ್ತಲು ಹೆಚ್ಚಾದ ಟ್ರಾಫಿಕ್ ಜಾಮ್ ಐಕಿಯಾ ಮಾಲ್ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿಯೇ ಇದ್ದು, ಸಾರ್ವಜನಿಕರು ಮೆಟ್ರೋ ರೈಲನ್ನು ಉಪಯೋಗಿಸಲು ಕೋರಲಾಗಿದೆ. ಪ್ರಸ್ತುತ ಪೀಣ್ಯ ಫ್ಲೈಓವರ್ ನಲ್ಲಿ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶವಿರುವುದರಿಂದ, ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಬರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಐಕಿಯಾ ಮಾಲ್ ಒಳಗಡೆ ಸುಮಾರು 1400 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ವಾಹನಗಳ ಪಾರ್ಕಿಂಗ್ ಸಲುವಾಗಿ ಮಾದಾವರ ಬಳಿ BIEC ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಐಕಿಯಾ ಮಾಲ್ ಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ತುಮಕೂರು ಮುಖ್ಯ ರಸ್ತೆಯಲ್ಲಿ ಹಾಗೂ ಜಿಂದಾಲ್ ಅಂಡರ್ ಪಾಸ್ ಬಳಿ ಬೋರ್ಡ್ ಅಳವಡಿಸಲಾಗಿದೆ. ತುಮಕೂರು ಮುಖ್ಯರಸ್ತೆ, ಜಿಂದಾಲ್ ಅಂಡರ್ ಪಾಸ್, ನಾಗಸಂದ್ರ ಮೆಟ್ರೋ ನಿಲ್ದಾಣ ಹಾಗೂ 8ನೇ ಮೈಲಿ ಬಳಿ ಪೀಣ್ಯ ಸಂಚಾರ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಶ್ರಮವಹಿಸುತ್ತಿದ್ದು, ಸಾರ್ವಜನಿಕರು ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ರೈಲನ್ನು ಉಪಯೋಗಿಸುವಂತೆ ಮನವಿ ಮಾಡಿದ್ದಾರೆ.
ಓದಿ :ಬೆಳಗಾವಿಯಲ್ಲಿ ಗಿಳಿ ಮಾರಾಟ.. ಆರೋಪಿ ವಶ