ಕರ್ನಾಟಕ

karnataka

ETV Bharat / state

Bengaluru rain: ನಗರದಲ್ಲಿ ಅಬ್ಬರಿಸಿದ ವರುಣ.. ಹಲವೆಡೆ ಟ್ರಾಫಿಕ್ ಜಾಮ್

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದು ಬೆಂಗಳೂರಿನ ಕೆಲವೆಡೆ ಮಳೆ ಆಗಿದ್ದು, ಅಲ್ಲಲ್ಲಿ ಟ್ರಾಫಿಕ್​ ಜಾಮ್​ಗೂ ಕಾರಣವಾಯಿತು.

Traffic jam in some parts of Bangalore due to rain
ನಗರದಲ್ಲಿ ಅಬ್ಬರಿಸಿದ ವರುಣ

By ETV Bharat Karnataka Team

Published : Sep 20, 2023, 9:21 PM IST

ಬೆಂಗಳೂರಿನ ಕೆಲವೆಡೆ ಮಳೆ ಆಗಿದ್ದು, ಅಲ್ಲಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿದೆ

ಬೆಂಗಳೂರು: ನೈರುತ್ಯ ಮುಂಗಾರು ರಾಜ್ಯದಲ್ಲಿ ಚುರುಕಾಗಿದ್ದು ಮಳೆ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡುತ್ತಿದ್ದಂತೆ, ಬೆಂಗಳೂರಿಗೆ ವರುಣನ ಸಿಂಚನ ಆಗಿದೆ. ನಗರದಲ್ಲಿ ಸಂಜೆಯ ವೇಳೆ ವರುಣ ಅಬ್ಬರಿಸಿದ್ದು, ಭಾರೀ ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕಿರಿ ಕಿರಿ ಅನುಭವಿಸಿದರು.

ಮಲ್ಲೇಶ್ವರ, ಚಾಮರಾಜಪೇಟೆ, ಮೆಜೆಸ್ಟಿಕ್, ರಾಜಾಜಿನಗರ, ಗಾಂಧಿಬಜಾರ್, ಜಯನಗರ, ಜೆಪಿ ನಗರ ಸೇರಿದಂತೆ ಹಲವೆಡೆ ಮಳೆ ಬಂದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಮನೆಗೆ ತೆರಳುವ ಬೈಕ್ ಸವಾರರಿಗೆ ಮಳೆ ಕಿರಿಕಿರಿ ಉಂಟು ಮಾಡಿತು. ರಸ್ತೆ ಬದಿ ನಿಂತು ಮಳೆ ನಿಲ್ಲುವುದನ್ನು ಬೈಕ್ ಸವಾರರು ಕಾಯುತ್ತಿರುವುದು ಕಂಡುಬಂತು.

ನಗರದಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಭಾರಿ ಬಿಸಿಲಿತ್ತು. ಸಂಜೆಯ ವೇಳಗೆ ಮಳೆಯಾಗಿದೆ. ನಾಳೆಯೂ ಭಾರೀ ಮಳೆಯಾಗಲಿದ್ದು, ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಯೆಲ್ಲೋ ಅಲರ್ಟ್​ ಘೋಷಣೆ: ನೈರುತ್ಯ ಮುಂಗಾರು ಕರಾವಳಿಯಲ್ಲಿ ಚುರುಕು ಪಡೆದುಕೊಂಡಿದ್ದು, ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ ಮಳೆ ಒಳನಾಡಿನಲ್ಲಿ ದುರ್ಬಲವಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿ.ಮೀ. ಇರಲಿದೆ. ಆದರೆ, ಕರಾವಳಿ ಭಾಗದ ಮೀನುಗಾರರಿಗೆ ಯಾವುದೇ ಮುನ್ನಚ್ಚರಿಕೆ ನೀಡಲಾಗಿಲ್ಲ.

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ರಾತ್ರಿಯ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಎಷ್ಟು ಮಳೆ: ಮುಖ್ಯವಾಗಿ ಇಂದು ಅತಿ ಹೆಚ್ಚು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 9 ಸೆಂ. ಮೀ ಮಳೆಯಾಗಿದೆ. ಕುಮಟ, ಅಂಕೋಲದಲ್ಲಿ ತಲಾ 6 ಸೆಂ. ಮೀ , ಹೊನ್ನಾವರದಲ್ಲಿ 5 ಮತ್ತು ಕಾರವಾರದಲ್ಲಿ 4 ಸೆಂ.ಮೀ ಮಳೆಯಾಗಿದೆ. ಕೊಲ್ಲೂರು (ಉಡುಪಿ ಜಿಲ್ಲೆ) 3, ಉಡುಪಿ, ಮುನಿರಾಬಾದ್ (ಕೊಪ್ಪಳ ಜಿಲ್ಲೆ), ಹೆಸರಘಟ್ಟ (ಬೆಂಗಳೂರು ನಗರ ಜಿಲ್ಲೆ ), ಕಳಸ (ಚಿಕ್ಕಮಗಳೂರು ಜಿಲ್ಲೆ ), ಲಿಂಗನಮಕ್ಕಿ ಎಚ್‌ಎಂಎಸ್ (ಶಿವಮೊಗ್ಗ ಜಿಲ್ಲೆ ), ಕಂಪ್ಲಿ (ಬಳ್ಳಾರಿ) ತಲಾ 2; ಕುಂದಾಪುರ, ಕೋಟ (ಎರಡೂ ಉಡುಪಿ ಜಿಲ್ಲೆ ), ಯಲ್ಲಾಪುರ, ಗೇರುಸೊಪ್ಪ (ಎರಡೂ ಉತ್ತರ ಕನ್ನಡ ಜಿಲ್ಲೆ ), ರೋನ್ (ಗದಗ ಜಿಲ್ಲೆ ) , ಕುಂದಗೋಳ (ಧಾರವಾಡ ಜಿಲ್ಲೆ ), ಗಂಗಾವತಿ (ಕೊಪ್ಪಳ ಜಿಲ್ಲೆ ) , ತಿಪಟೂರು (ತುಮಕೂರು ಜಿಲ್ಲೆ ) , ಜಯಪುರ, ಕಮ್ಮರಡಿ , ಬಾಳೆಹೊನ್ನೂರು (ಎಲ್ಲಾ ಚಿಕ್ಕಮಗಳೂರು ಜಿಲ್ಲೆ ), ಸಂಡೂರು (ಬಳ್ಳಾರಿ ಜಿಲ್ಲೆ ), ಹೊಸಪೇಟೆ (ವಿಜಯನಗರ ಜಿಲ್ಲೆ ) , ಬಿ ದುರ್ಗ (ಚಿತ್ರದುರ್ಗ ಜಿಲ್ಲೆ ) , ಮಾಲೂರು (ಕೋಲಾರ ಜಿಲ್ಲೆ ) ತಲಾ 1 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ:ನೈರುತ್ಯ ಮುಂಗಾರು ಕರಾವಳಿಯಲ್ಲಿ ಚುರುಕು, ನಾಳೆ ಯೆಲ್ಲೋ ಅಲರ್ಟ್: ಹವಾಮಾನ ಇಲಾಖೆ

ABOUT THE AUTHOR

...view details