ಬೆಂಗಳೂರು: ಅತಿ ಹೆಚ್ಚು ವಾಹನ ಸಂಚರಿಸುವ ಪೀಣ್ಯಾ ಎಲಿವೇಟೆಡ್ ಫ್ಲೈಓವರ್ ಎರಡು ತಿಂಗಳಾದರೂ ರಿಪೇರಿ ಆಗದೆ ಕೆಲಸ ಕುಂಠಿತಗೊಂಡಿದೆ ಎಂದು ಜೆಡಿಎಸ್ ಶಾಸಕ ಮಂಜುನಾಥ್ ವಿಧಾನಸಭೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಭಾಗದ ಜನ ಟ್ರಾಫಿಕ್ ಜಾಮ್‌ನಿಂದ ಬಳಲುತ್ತಿದ್ದಾರೆ. ಆ್ಯಂಬುಲೆನ್ಸ್‌ಲ್ಲಿ ರೋಗಿಯು ಸಾವು- ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆದರೂ ಸೂಕ್ತ ಉತ್ತರ ಸಿಗುತ್ತಿಲ್ಲ.
ಲಘು ವಾಹನ ಅಥವಾ ಆ್ಯಂಬುಲೆನ್ಸ್ ಇಲ್ಲಿ ಸಂಚರಿಸಲು ಬಿಡಬಹುದಿತ್ತು. ಆದರೆ, ವಾಹನಗಳನ್ನು ಬಿಡುತ್ತಿಲ್ಲ. ಟೋಲ್ ಸಂಗ್ರಹ ಮಾಡುತ್ತಿದ್ದು,ಮೊದಲು ಟೋಲ್ ಸಂಗ್ರಹ ಮಾಡುವುದನ್ನು ತಡೆಯುವಂತೆ ಶಾಸಕರು ಒತ್ತಾಯಿಸಿದರು.
8ನೇ ಮೈಲಿಯಿಂದ ಲಕ್ಷಾಂತರ ವಾಹನ ಬರುತ್ತಿವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಮಧ್ಯೆಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಚಾಲಕರಿಗೆ ತೊಂದರೆ ಆಗುತ್ತಿದೆ. ಸರ್ಕಾರ ದೃಢವಾದ ನಿಲುವು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.