ಬೆಂಗಳೂರು :ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅನರ್ಹಗೊಂಡ ಮಹಮ್ಮದ್ ನಲಪಾಡ್ ಹ್ಯಾರಿಸ್ ಮೂರು ದಿನಗಳ ನಂತರ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ವೇಳೆ ಅವರ ಬೆಂಬಲಿಗರು ನಡೆಸಿದ ಮೆರವಣಿಗೆಯಿಂದಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆಯಾಗಿತ್ತು.
ತಮ್ಮ ಸ್ಪರ್ಧೆ ಅನರ್ಹಗೊಂಡ ಹಿನ್ನೆಲೆ ಅತಿ ಹೆಚ್ಚು ಮತಗಳಿಸಿದರೂ ಅಧ್ಯಕ್ಷರಾಗುವ ಅವಕಾಶದಿಂದ ವಂಚಿತರಾದ ನಲಪಾಡ್, ಪಕ್ಷದ ಹೈಕಮಾಂಡ್ ನಾಯಕರ ಭೇಟಿಗಾಗಿ ಕಳೆದ ಮೂರು ದಿನಗಳಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದರು. ಇಂದು ಮಧ್ಯಾಹ್ನ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಬೃಹತ್ ಮೆರವಣಿಗೆ ಮೂಲಕ ರಾಜಧಾನಿಯನ್ನು ಪ್ರವೇಶ ಮಾಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೂರಾರು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಬೆಂಗಳೂರಿಗೆ ಆಗಮಿಸಿದ್ದರಿಂದ, ಮಾರ್ಗ ಮಧ್ಯೆ 2 ರಿಂದ 3 ಗಂಟೆ ಸಂಚಾರ ದಟ್ಟಣೆ ಉಂಟಾಯ್ತು. ಈ ಮಾರ್ಗದಲ್ಲಿ ಸಾಗಬೇಕಿದ್ದ ಸಾಕಷ್ಟು ಮಂದಿ ಹಾಗೂ ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಇತರ ಮಾರ್ಗಗಳು ನಾಲ್ಕೈದು ಗಂಟೆಗಳ ಕಾಲ ಸಂಚಾರ ದಟ್ಟಣೆ ಸಮಸ್ಯೆಗೆ ಒಳಗಾಗಿದ್ದವು.