ಬೆಂಗಳೂರು: ಕಾನೂನು ಜಾರಿ ಪ್ರಕ್ರಿಯೆಯಲ್ಲಿ ಸರಳಗೊಳಿಸಲು ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡಲು ರಾಜ್ಯ ಪೊಲೀಸ್ ಇಲಾಖೆಯು ಸಂಚಾರ ನಿಯಮ ಉಲ್ಲಂಘನೆಯ ದಂಡ ಸಂಗ್ರಹಣೆಗೆ ಇ-ಚಲನ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಇದಕ್ಕೆ ಮತ್ತಷ್ಟು ಪಾರದರ್ಶಕತೆಯ ಸ್ಪರ್ಶ ನೀಡಲು ಇಲಾಖೆ ಮುಂದಾಗಿದೆ. ವಾಹನ ಸವಾರರು ಕಟ್ಟುವ ದಂಡದ ಹಣವು ನೇರವಾಗಿಯೇ ಸರ್ಕಾರದ ಖಜಾನೆಗೆ ಜಮೆಯಾಗುವ ವ್ಯವಸ್ಥೆ ರೂಪಿಸಲಾಗಿದೆ. ಕನ್ನಡ ರಾಜ್ಯೋತ್ಸವ ದಿನದಿಂದ ಈ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.
ಈ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ಸವಾರರಿಂದ ಪರ್ಸನಲ್ ಡಿಜಿಟಲ್ ಅಸ್ಟಿಸೆಂಟ್ (ಪಿಡಿಎ) ಉಪಕರಣ ಮೂಲಕ ಪೊಲೀಸರು ದಂಡ ಕಟ್ಟಿಸಿಕೊಳ್ಳುತ್ತಿದ್ದರು. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮೂಲಕ ಸರ್ಕಾರದ ಖಜಾನೆಗೆ ದಂಡ ಪಾವತಿ ಹಣ ಹೋಗುವ ವ್ಯವಸ್ಥೆ ಇದಾಗಿದೆ. ಆದರೆ, ನವೆಂಬರ್ 1ರ ನಂತರ ದಂಡದ ರೂಪದಲ್ಲಿ ಪಾವತಿಯಾದ ಹಣ ಬ್ಯಾಂಕ್ ಖಾತೆಗೆ ತೆರಳದೆ ನೇರವಾಗಿ ಸರ್ಕಾರದ ಖಜಾನೆಗೆ ಹೋಗಲಿದೆ. ಈ ಕ್ರಮವು ಮುಕ್ತ ಹಾಗೂ ಪಾರದರ್ಶಕತೆ ಹೆಚ್ಚಿಸಲು ಸಹಕಾರಿಯಾಗಲಿದೆ.
ಅಷ್ಟೇ ಅಲ್ಲ, ಹೊಸ ನೂತನ ವ್ಯವಸ್ಥೆ ಜಾರಿಯಾದರೆ ದೇಶದಲ್ಲಿ ಇಂತಹ ವ್ಯವಸ್ಥೆ ಹೊಂದಿದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಸದ್ಯ ಕಾರ್ಡ್ ಮತ್ತು ಯುಪಿಐ ಬಳಸಿ ಸಂಗ್ರಹಿಸಿದ ದಂಡದ ಮೊತ್ತವನ್ನು ಬ್ಯಾಂಕ್ ಮೂಲಕ ಖಜಾನೆಗೆ ವರ್ಗಾಯಿಸಲಾಗುತ್ತಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಒಟ್ಟು 2500 ಸಂಖ್ಯೆಯ ಪಿಡಿಎ ಉಪಕರಣಗಳು ಉಚಿತವಾಗಿ ನೀಡಿದ್ದು, ಈ ಪೈಕಿ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ 700 ಪಿಡಿಎ ಉಪಕರಣ ವಿತರಿಸಲಾಗಿದೆ.
ಸದ್ಯ ಅಸ್ತಿತ್ವದಲ್ಲಿರುವ ಇ-ಚಲನ್ ವ್ಯವಸ್ಥೆಯು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸಂಚಾರ ದಂಡ ಪಾವತಿ ಮಾಡಲು ತಮ್ಮ ಕಾರ್ಡ್ ಹಾಗೂ ಯುಪಿಐ ಬಳಸುವ ಸೌಲಭ್ಯವನ್ನು ಒದಗಿಸುತ್ತದೆ. ಆನ್‍ಲೈನ್ ವ್ಯವಸ್ಥೆಯ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‍ಗಳು, ಲ್ಯಾಪ್ ಟಾಪ್‍ಗಳು ಅಥವಾ ಇತರ ಡಿಜಿಟಲ್ ಸಾಧನಗಳಲ್ಲಿ ಬಾಕಿ ಇರುವ ತಮ್ಮ ದಂಡ ಪಾವತಿಯ ಮಾಹಿತಿ ಕುರಿತು ಪರಿಶೀಲಿಸಲು ಅವಕಾಶವಿದೆ.