ಬೆಂಗಳೂರು:ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ನಗರದಲ್ಲಿ ದಂಡ ಪ್ರಮಾಣ ಹೆಚ್ಚಳವಾಗಿದ್ದು, ಕೇವಲ 8 ದಿನಗಳಲ್ಲಿ 2.38 ಕೋಟಿ ದಂಡ ಸಂಗ್ರಹವಾಗಿದೆ.
8 ದಿನಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು? - ಸಂಚಾರಿ ಪೊಲೀಸರು
ಬೆಂಗಳೂರಲ್ಲಿ 55 ವಿವಿಧ ಬಗೆಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಕೇವಲ 8 ದಿನಗಳಲ್ಲಿ 2.38 ಕೋಟಿ ರೂ. ದಂಡವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ವಸೂಲಿ ಮಾಡಿದ್ದಾರೆ.
ಬರೋಬ್ಬರಿ 2,38,76,500 ರೂಪಾಯಿ ಸಂಗ್ರಹಿಸಿರುವ ಸಂಚಾರಿ ಪೊಲೀಸರು, ಕಳೆದ ಎಂಟು ದಿನಗಳಲ್ಲಿ ವಿವಿಧ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬರೋಬ್ಬರಿ 84,589 ಕೇಸ್ಗಳನ್ನು ದಾಖಲಿಸಿಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕೆ ಅತಿ ಹೆಚ್ಚಿನ ದಂಡ ಸಂಗ್ರಹವಾಗಿದ್ದು 38,48,100 ರೂಪಾಯಿ ದಂಡ, ಇದರಲ್ಲಿ 16,710 ಪ್ರಕರಣಗಳು, ಹಿಂಬದಿ ಸವಾರರು ಹೆಲ್ಮೆಟ್ ಧರಿಸದ್ದಕ್ಕೆ 10977 ಪ್ರಕರಣಗಳಲ್ಲಿ 31,41,600 ರೂಪಾಯಿ ಡಂಡ ವಸೂಲಿ ಮಾಡಲಾಗಿದೆ.
ದಂಡ ಹೆಚ್ಚಾದರೂ ಸಿಗ್ನಲ್ ಜಂಪ್ ಮಾಡುವ ಅಭ್ಯಾಸ ರೂಢಿಸಿಕೊಂಡಿರುವ ಸವಾರರಿಂದ 13,57,600 ರೂಪಾಯಿ, ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ 19,97,500 ರೂ. ದಂಡ ಹೀಗೆ ಒಟ್ಟು 55 ವಿವಿಧ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆಗಳಿಂದ ಕೇವಲ 8 ದಿನಗಳ ಕಲೆಕ್ಷನ್ 2,38,76,500 ರೂಪಾಯಿ ಆಗಿದೆ. ಅಂದಾಜು ದಿನಕ್ಕೆ 29 ಲಕ್ಷ ರೂಪಾಯಿಯಂತೆ ಸಂಗ್ರಹವಾಗಿದ್ದು, ಹೀಗೆ ಆದ್ರೆ ತಿಂಗಳಿಗೆ 8 ಕೋಟಿಯಷ್ಟು ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿವೋರ್ವರು ತಿಳಿಸಿದ್ದಾರೆ.