ಬೆಂಗಳೂರು :ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೀ ರೈಲು ಹಳಿ ತಪ್ಪಿದ್ದರಿಂದಾಗಿ ಸುಗಮ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ರೀ ರೈಲು ವಾಹನವನ್ನು ಸ್ಥಳದಿಂದ ಲಿಫ್ಟ್ ಮಾಡಲಾಗಿದೆ. ಕ್ರೇನ್ ಮೂಲಕ ಸಿಬ್ಬಂದಿ ರೀ ರೈಲನ್ನು ತೆರವುಗೊಳಿಸಿ ರಸ್ತೆಗಿಳಿಸಿದರು.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಮಾಹಿತಿ ನೀಡದ ಬಿಎಂಆರ್ಸಿಎಲ್ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ರೀ ರೈಲು ಹಳಿ ತಪ್ಪಿದ್ದರಿಂದ ಅನಿವಾರ್ಯವಾಗಿ ಉಭಯ ಹಳಿಗಳ ಮಧ್ಯೆ ಮೆಟ್ರೋ ಸಂಚಾರವನ್ನು ತಡೆಹಿಡಿಯಲಾಗಿತ್ತು. ಈ ಸಂಗತಿ ತಿಳಿಯದೇ ಹಲವು ಪ್ರಯಾಣಿಕರು ಯಶವಂತಪುರ ಮೆಟ್ರೋ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿವಿಧ ಕೆಲಸಗಳ ನಿಮಿತ್ತ ನಿಲ್ದಾಣದಲ್ಲಿ ನೆರೆದಿದ್ದ ಪ್ರಯಾಣಿಕರು ಮೆಟ್ರೋ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಹಳಿ ತಪ್ಪಿದ ಮೆಟ್ರೋ ರೀ ರೈಲು: ಇಂದು ಬೆಳಗ್ಗೆ ರಾಜಾಜಿನಗರದ ಬಳಿ ನಮ್ಮ ಮೆಟ್ರೋ ಗ್ರೀನ್ ಲೈನ್‌ನಲ್ಲಿ ರೀ ರೈಲು ಹಳಿ ತಪ್ಪಿದ್ದು, ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಕಾಲಕ್ಕೆ ನಿಗದಿತ ಸ್ಥಳ ತಲುಪಲು ಸಾಧ್ಯವಾಗದೆ ಪ್ರಯಾಣಿಕರು ಪರದಾಡಿದರು. ಇದೀಗ ರೀ ರೈಲನ್ನು ಸ್ಥಳದಿಂದ ಲಿಫ್ಟ್ ಮಾಡಲಾಗಿದೆ. ಇದಕ್ಕೂ ಮುನ್ನ ಒಂದು ಟ್ರ್ಯಾಕ್ನಲ್ಲಿ ಮಾತ್ರ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿದ್ದವು.