ಬೆಂಗಳೂರು: ಕಾರೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರಣ್ಯಪುರ ನಿವಾಸಿ ವಿಕ್ರಮ್ ಮೃತರು ಎಂದು ತಿಳಿದುಬಂದಿದೆ.
ಸಿಸಿ ಕ್ಯಾಮರಾಗಳ ಅಳವಡಿಕೆ ಕೆಲಸ ಮಾಡುವ ವಿಕ್ರಮ್, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ವಿದ್ಯಾರಣ್ಯಪುರ ಕಡೆಯಿಂದ ಬ್ಯಾಲಕೆರೆ ರಸ್ತೆಯ ವೀರಸಾಗರದ ಕಡೆ ಹೋಗುತ್ತಿದ್ದರು. ಅದೇ ವೇಳೆ ಎದುರುಗಡೆಯಿಂದ ಬಂದ ಕಾರು ವಿಕ್ರಮ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಕ್ರಮ್ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಎಸ್ಐಗೆ ಡಿಕ್ಕಿ: ವೇಗವಾಗಿ ಬಂದ ಆಟೋ ಚಾಲಕನೊಬ್ಬ ಕರ್ತವ್ಯನಿರತ ಎಎಸ್‌ಐಗೆ ಡಿಕ್ಕಿ ಹೊಡೆದಿರುವ ಘಟನೆ ಹೈಗ್ರೌಂಡ್ಸ್ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಹೈಗ್ರೌಂಡ್ ಸಂಚಾರ ಠಾಣೆಯ ಎಎಸ್‌ಐ ನಾಗರಾಜ್ ಗಾಯಗೊಂಡವರು. ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಆಟೋ ಚಾಲಕ ಶಿವಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ಎಎಸ್‌ಐ ನಾಗರಾಜ್ ಭಾನುವಾರ ಚಾಲುಕ್ಯ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಸಂಜೆ 4 ಗಂಟೆ ಸುಮಾರಿಗೆ ಅರಮನೆ ರಸ್ತೆಯಲ್ಲಿ ಸಿಐಡಿ ಕಚೇರಿ ಕಡೆಯಿಂದ ಚಾಲುಕ್ಯ ವೃತ್ತಕ್ಕೆ ವೇಗವಾಗಿ ಬಂದ ಆಟೋರಿಕ್ಷಾ ಏಕಾಏಕಿ ನಾಗರಾಜ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಗರಾಜ್ ಏಳೆಂಟು ಅಡಿ ಮುಂದಕ್ಕೆ ಹಾರಿ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ಎಎಸ್‌ಐ ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.